ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ದೇಜಪ್ಪ ಪೂಜಾರಿ ತಾಳಿತ್ತಬೆಟ್ಟು ಇವರಿಗೆ ಶ್ರದ್ಧಾಂಜಲಿ

“ಜಾತಸ್ಯ ಮರಣಂ ಧ್ರುವಂ” ಎಂಬ ಮಾತಿನಂತೆ ಹುಟ್ಟಿದ ಪ್ರತಿಯೊಬ್ಬ ಜೀವಿಯ ತನ್ನ ಕರ್ತವ್ಯವನ್ನು ನಿರ್ವಹಿಸಿದ ನಂತರ ಜೀವವನ್ನು ತ್ಯಾಗ ಮಾಡಲೇಬೇಕು. ಈ ಹುಟ್ಟು ಸಾವಿನ ನಡುವಿನ ಜೀವನದಲ್ಲಿ ಜನಾನುರಾಗಿಯಾಗಿ,ನಮ್ಮ ಯುವಕ ಮಂಡಲದ ಹಿರಿಯ ಸದಸ್ಯರಾಗಿ, ನಮ್ಮೆಲ್ಲರನ್ನು ತನ್ನ ಹಾಸ್ಯ ಚಟಾಕಿಯಲ್ಲಿ ನಗಿಸುತ್ತ, ನಾವು ಮಾಡುವ ಕಲಾ ಸೇವೆಯಲ್ಲಿ ನಮ್ಮೊಂದಿಗೆ ಹಾಸ್ಯ ಕಲಾವಿದರಾಗಿ ನಟಿಸಿ, ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮಗೆ‌ ಮಾರ್ಗದರ್ಶನ ನೀಡುತ್ತಿದ್ದ ನಮ್ಮ ಆತ್ಮೀಯರಾದ, ಇಂದು ತನ್ನ ದೇಹ ತ್ಯಾಗ ಮಾಡಿ ಸ್ವರ್ಗಸ್ತರಾದ  ಶ್ರೀ ದೇಜಪ್ಪ ಪೂಜಾರಿ ತಾಳಿತ್ತಬೆಟ್ಟು ಅವರ ಆತ್ಮಕ್ಕೆ ಶ್ರೀ ಸೋಮನಾಥ ಶಾಂತಿಯನ್ನು ನೀಡಲೆಂದು ಆಶಿಸುವ.

-ಅಧ್ಯಕ್ಷರು ಮತ್ತು ಸರ್ವ ಸದಸ್ಯರು

ಯುವಕ ಮಂಡಲ (ರಿ.) ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ : ಎನ್ ಎಸ್ ಎಸ್ ವಿಶೇಷ ಶಿಬಿರದ ಬಗ್ಗೆ ಪೂರ್ವಭಾವಿ ಸಭೆ

ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜ್ ಮತ್ತು ಇರಾ ಪಂಚಾಯತ್, ಇರಾ ಯುವಕ ಮಂಡಲ(ರಿ) ಹಾಗೂ ಇರಾ ಗ್ರಾಮಸ್ಥರ ಒಗ್ಗೂಡುವಿಕೆಯಿಂದ ದಿನಾಂಕ ಜನವರಿ 24 ರಿಂದ 31 ರ ವರೆಗೆ ನಡೆಯುವ ಎನ್ ಎಸ್ ಎಸ್ ವಿಶೇಷ ಶಿಬಿರದ ನಡೆಸುವ ಬಗ್ಗೆ ಇರಾ ತಾಳಿತ್ತಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಗ್ನೇಸ್ ಡಿಸೋಜ, ಉಪಾಧ್ಯಕ್ಷರಾದ ಮೊಯಿದಿನ್ ಕುಂಞಿ, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಝಾಕ್ ಕುಕ್ಕಾಜೆ, ಕೆ.ಟಿ. ಸುಧಾಕರ, ಸದಸ್ಯರಾದ ಶ್ರೀಮತಿ ವಾಣಿಶ್ರೀ, ಶ್ರೀಮತಿ ನಿರ್ಮಲ, ಶ್ರೀಮತಿ ರೇಣುಕಾ,ಶ್ರೀಮತಿ ಚಂದ್ರಪ್ರಭಾ, ಇರಾ ತಾಳಿತ್ತಬೆಟ್ಟು ಶಾಲೆಯ ಮುಖ್ಯೋಪಾದ್ಯಾಯಿನಿ ಶ್ರೀಮತಿ ಸೋನಿತ, ಯುವಕ ಮಂಡಲ(ರಿ.)ಇರಾ ಇದರ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ, ಇರಾ ಶಾಲಾ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮುರಳೀಧರ ಭಂಡಾರಿ,ಆಗ್ನೇಸ್ ಕಾಲೇಜ್ ನ ಉಪಪ್ರಾಂಶುಪಾಲರಾದ ಸಿಸ್ಟರ್ ಕ್ಲಾರಾ, ಅಧಿಕಾರಿಗಳಾದ ಡಾ!! ಉದಯಕುಮಾರ್, ಶ್ರೀಮತಿ ಮೀರಾ ದೇವಿ, ಮಿಸ್ ಪ್ರೀತಾ ಉಪಸ್ಥಿತರಿದ್ದರು


ನಿಮ್ಮ ಟಿಪ್ಪಣಿ ಬರೆಯಿರಿ

ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡ‌ ಯುವಕ ಮಂಡಲದ 49ನೇ ವಾರ್ಷಿಕೋತ್ಸವ

ಯುವಕ ಮಂಡಲ (ರಿ.) ಇರಾ ಇದರ 49ನೇ‌ ವಾರ್ಷಿಕೋತ್ಸವ ದಿನಾಂಕ 25-12-2022 ರ ಭಾನುವಾರ ಯುವಕ ಮಂಡಲದ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಮಧ್ಯಾಹ್ನ 3.30 ಕ್ಕೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳದ ದೇವರ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು, ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟದೊಂದಿಗೆ‌ ಸಂಪನ್ನವಾಯಿತು. ವಾರ್ಷಿಕೋತ್ಸವದ ಅಂಗವಾಗಿ‌ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಮಾಲಿಕರಾದ ಶ್ರೀ ದಿವಾಣ ಗೋವಿಂದ ಭಟ್ ಮಾತನಾಡಿ ಯಕ್ಷಗಾನಕ್ಕೂ ಇರಾಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಬಹಳ ವಿಸ್ತೃತವಾಗಿ ವಿವರಿಸಿದರು.‌ನಂತರ ಮಾತನಾಡಿದ ಶ್ರೀ ಗಣೇಶ್ ಮೆಡಿಕಲ್ಸ್ ಕಲ್ಲಡ್ಕ ಇದರ ಮಾಲಿಕರಾದ ಶ್ರೀ ಚಂದ್ರಶೇಖರ ರೈ ಕೊಲ್ಯ, ಯಕ್ಷಗಾನಕ್ಕೂ ಹಾಗು‌ ಯುವಕ‌ ಮಂಡಲಕ್ಕೂ ಇರುವ ನಂಟಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ತಾಲೂಕು‌ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಆರ್ ಕರ್ಕೇರ ಮಾತನಾಡಿ ಯುವಕಮಂಡಲದ‌ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಸ್ತುತ ಕಟೀಲು ಮೇಳದ ಪ್ರಬಂಧಕರಾದ ಶ್ರೀ ಶ್ರೀಧರ ಪೂಜಾರಿ ಪಂಜಾಜೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಯುವಕ‌ ಮಂಡಲದ ಸ್ಥಾಪಕ‌‌ ಸದಸ್ಯರಾದ ಶ್ರೀ ಗೋಪಾಲ ಮಾಸ್ಟರ್ ಕುಂಡಾವು, ಶ್ರೀ ಜನಾರ್ಧನ‌ ಪಕ್ಕಳ ತಾಳಿತ್ತಬೆಟ್ಟು ಇವರನ್ನು ಗೌರವಿಸಲಾಯಿತು. ಅತೀ ಹೆಚ್ಚು ‌ಅಂಕ ಗಳಿಸಿದ ಊರಿನ‌ ವಿದ್ಯಾರ್ಥಿಗಳಿಗೆ ‌ಪ್ರೊತ್ಸಾಹಧನ ನೀಡಲಾಯಿತು. ಯಕ್ಷಗಾನಕ್ಕೆ ಬೆನ್ನೆಲುಬಾಗಿ ನಿಂತು‌ ಸಂಘದ ‌ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ‌ ಪಾಲ್ಗೊಳ್ಳುವ ಸಂಘದ ಸದಸ್ಯರಾದ ಶ್ರೀ ಸ್ಟೀವನ್‌ ಡಿಸಿಲ್ವ ದೈವದಹಿತ್ಲು, ಶ್ರೀ ಅದ್ರಾಮ ಡಿ ಇವರನ್ನು ಗೌರವಿಸಲಾಯಿತು. ಸಂಧರ್ಭದಲ್ಲಿ ಉದ್ಯಮಿ, ಶ್ರೀ ಜಗದೀಶ ಆಳ್ವ ನಾರ್ಯಗುತ್ತು, ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭರತ್ ರಾಜ್ ರೈ ಸಂಘದ ವಾರ್ಷಿಕ ವರದಿ ವಾಚಿಸಿದರು, ಶ್ರೀ ಪುಷ್ಪರಾಜ್ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀ ನಿತೇಶ್ ಶೆಟ್ಟಿ ಸಂಪಿಲ ವಂದಿಸಿದರು. ಯತಿರಾಜ್ ಶೆಟ್ಟಿ ಸಂಪಿಲ‌ ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ‌ ಮಂಡಲದ‌ 49ನೇ ವಾರ್ಷಿಕೋತ್ಸವದ ಕರೆಯೋಲೆ

ಆತ್ಮೀಯರೇ

ಇದೇ ಬರುವ ತಾರೀಖು 25-12-2022 ರ ಭಾನುವಾರ ಯುವಕ ಮಂಡಲ ( ರಿ.) ಇರಾ ಇದರ 49ನೇ ವಾರ್ಷಿಕೋತ್ಸವದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಇರಾ ಯುವಕ ಮಂಡಲದ ವಠಾರದಲ್ಲಿ ನಡೆಯಲಿದ್ದು, ಸಂಜೆ 3.30 ಗಂಟೆಗೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಯುವಕ ಮಂಡಲದವರೆಗೆ ಮೇಳದ ದೇವರ ಭವ್ಯವಾದ ಮೆರವಣಿಗೆಯು ಸಾಗಲಿದ್ದು, ನಂತರ ಯುವಕ ಮಂಡಲದ ರಂಗ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಂತರ 5.30 ಕ್ಕೆ ಸರಿಯಾಗಿ ಚೌಕಿ ಪೂಜೆ , ಪ್ರಸಾದ ವಿತರಣೆ, 8.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿ ತನು-ಮನ-ಧನ ಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ.

ಅಶ್ವಿತ್ ಕೊಟ್ಟಾರಿ
ಅಧ್ಯಕ್ಷರು
ಯುವಕ ಮಂಡಲ(ರಿ.) ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಉಚಿತ ವೈದ್ಯಕೀಯ ಶಿಬಿರ

ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ (ರಿ.) ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ ಹಾಗು ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಕುಂಡಾವು, ಇರಾ ಗ್ರಾಮ ಪಂಚಾಯತ್, ಯುವಕ ಮಂಡಲ(ರಿ.) ಇರಾ ಇವರ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಹಾಗು ದಂತ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ದಿನಾಂಕ 23-10-2022 ಆದಿತ್ಯವಾರ ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಇರಾ ಇಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮೊಕ್ತೇಸರರಾದ ಶ್ರೀ ವೈ.ಬಿ ಸುಂದರ್, ಇರಾ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷ ರೂ, ಹಾಲಿ ಸದಸ್ಯರೂ ಆದ ಶ್ರೀ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ನ ಹಾಗು ಯುವಕ ಮಂಡಲದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸತ್ಯಸಾಯಿ ಸೇವಾ ಸಂಸ್ಥೆ ಯ ರಾಜ್ಯ ಪದಾಧಿಕಾರಿಗಳಾದ ಶ್ರೀ ಚಂದ್ರಶೇಖರ್ ನಾಯಕ್, ಶ್ರೀ ನಿರಂಜನ್ ಹೆಬ್ಬಾರ್, ಕಲ್ಲಾಡಿ ವಿಠ್ಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾದ ಶ್ರೀ ಜಯರಾಮ್ ಪೂಜಾರಿ ಸೂತ್ರಬೈಲು, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಮೊಯ್ದಿನ್ ಕುಂಞ, ಇರಾ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೋನಿತ, ಅಧ್ಯಾಪಕರಾದ ಶ್ರೀ ಮಹಮ್ಮದ್, ಯುವಕ ಮಂಡಲ(ರಿ.) ಇರಾ ಇದರ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಇರಾ, ಯನೆಪೊಯ ವೈದ್ಯಕೀಯ ಸಂಸ್ಥೆಯ ಡಾ| ಅಫ್ರೀನವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತ್ಯಸಾಯಿ ಸೇವಾ ಟ್ರಸ್ಟ್ ನ ಸದಸ್ಯರಾದ ಶ್ರೀ ದೇವಾನಂದ ರೈ ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ ಪುನರಾಯ್ಕೆ

ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾ ಸಭೆ ದಿನಾಂಕ 28-08-2022 ರಂದು ಇರಾ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ವಾರ್ಷಿಕ ಆಯವ್ಯಯಗಳನ್ನು ಮಂಡಿಸಲಾಯಿತು. ನಂತರ 2022-23 ಅವಧಿಗೆ ನೂತನ ಸದಸ್ಯರನ್ನು ಒಮ್ಮತದಿಂದ ಆಯ್ಕೆ‌ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಮಂಜುನಾಥ ಡಿ ಶೆಟ್ಟಿ, ಅಧ್ಯಕ್ಷರಾಗಿ ಸೂರ್ಯಪ್ರಕಾಶ್ ರೈ, ಉಪಾಧ್ಯಕ್ಷರಾಗಿ ಭರತರಾಜ್ ರೈ, ಕಾರ್ಯದರ್ಶಿಗಳಾಗಿ ಚರಣ್ ಪಕ್ಕಳ ಮತ್ತು ದೇವಿಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ನಿತೇಶ್ ಶೆಟ್ಟಿ ಮತ್ತು ವಿನೋದ್ ಕೆಂಜಿಲಾ, ಸಂಘಟನಾ ಕಾರ್ಯದರ್ಶಿಯಾಗಿ ರಾಜಶೇಖರ್ ರೈ, ಖಜಾಂಚಿಯಾಗಿ ಜಗದೀಶ್ ನಾಯರ್ ಕೋಡಿ ಮತ್ತಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಜ್ರಾಕ್ಷ ಟಿ. ಈ ಸಂದರ್ಭದಲ್ಲಿ ಭಜನಾ‌ ಮಂಡಳಿಯ‌ ಸದಸ್ಯರು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ‌ ಕೆಸರ್ಡೊಂಜಿ ದಿನ ಕಾರ್ಯಕ್ರಮ

ಯುವಕ‌ ಮಂಡಲ(ರಿ.) ಇರಾ ಇದರ‌ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ಕ್ರೀಡಾ ಕಾರ್ಯಕ್ರಮ ಕೆಸರ್ಡೊಂಜಿ ದಿನ ಇದೇ ಭಾನುವಾರ ದಿನಾಂಕ 04-09-2022ರಂದು‌‌ ಇರಾ ಬಾವಬೀಡಿನ‌ ಗದ್ದೆಯಲ್ಲಿ ನಡೆಯಿತು. ಬಾವಬೀಡು ದಿ| ಗೋಪಿ ಎಸ್ ಭಂಡಾರಿ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾವಬೀಡು ಶ್ರೀ ವೇಣುಗೋಪಾಲ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮುಖ್ಯ ಅತಿಥಿಗಳಾಗಿದ್ದ, ಪಿಲಿಕುಳ ವನ್ಯದಾಮದ ನಿರ್ದೇಶಕರಾದ  ಶ್ರೀ ಜಯಪ್ರಕಾಶ್ ಭಂಡಾರಿ ಬಾವಬೀಡು ಮಾತನಾಡಿ ಯುವಕ ಮಂಡಲದ ಈ ಕಾರ್ಯ ವನ್ನು ಶ್ಲಾಘಿಸಿ ಶುಭ‌ ಹಾರೈಸಿದರು. ಹಾಗೆಯೇ ಮತ್ತೋರ್ವ ಅತಿಥಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ| ಸತೀಶ್ ಭಂಡಾರಿ ಬಾವಬೀಡು ಮಾತನಾಡಿ ಮುಂದಿನ ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮದ ಅವಶ್ಯಕತೆಯನ್ನು ವಿವರಿಸಿದರು. ಹಾಗೆಯೇ ಶಾಸಕರಾದ ಯು.ಟಿ. ಖಾದರ್, ಮುಡಿಪು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕಾಜವ, ಬಂಟ್ವಾಳ ತಾಲೂಕು ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ರಾದ ಚಂದ್ರಹಾಸ ಕರ್ಕೇರ, ಇರಾ‌ ಗ್ರಾಮ‌ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಅಬ್ದುಲ್ ರಜಾಕ್ ಕುಕ್ಕಾಜೆ, ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀ ಪುಷ್ಪರಾಜ ಕುಕ್ಕಾಜೆ, ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ಸುಭೋದ್ ಭಂಡಾರಿ ಬಾವಬೀಡು‌, ಶ್ರೀ ಐ ನೇಮು‌ ಪೂಜಾರಿ ಆಚೆ‌ಬೈಲು ಶುಭ ಹಾರೈಸಿದರು. ಸಾಯಂಕಾಲ ಸಮಾರೋಪ‌‌‌‌ ಸಮಾರಂಭದಲ್ಲಿ ಭಾಗವಹಿಸಿದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ‌ ಶ್ರೀ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಶ್ರೀ ಜಗದೀಶ್ ಶೆಟ್ಟಿ ಇರಾಗುತ್ತು, ಶ್ರೀ ವೈ.ಬಿ‌‌ ಸುಂದರ್, ಚಿಣ್ಣರಲೋಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾದ ಶ್ರೀ ಚಂದ್ರಹಾಸ ರೈ ಬಾಲಾಜಿಬೈಲು, ಬಿ.ಜೆ.ಪಿ ಮುಖಂಡರಾದ ಶ್ರೀ ಸತೀಶ್ ‌ಕುಂಪಲ,‌ ಶ್ರೀ ಹೇಮಂತ್ ಶೆಟ್ಟಿ, ಶ್ರೀ ‌ಸಂತೋಷ್ ಕುಮಾರ್ ರೈ ಬೋಳ್ಯಾರ್, ಕಲ್ಲಾಡಿ ವಿಠಲ‌ ಶೆಟ್ಟಿ ಸೇವಾ ಟ್ರಸ್ಟ್ ನ‌ ಅಧ್ಯಕ್ಷರಾದ‌ ಜಯರಾಮ್ ಪೂಜಾರಿ‌‌ ಸೂತ್ರಬೈಲು, ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಕೊಟ್ಟಾರಿ ಸಂಪಿಲ, ಯುವಕ‌ ಮಂಡಲದ‌ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ವಿಜೇತರಿಗೆ ಬಹುಮಾನ‌ ವಿತರಿಸಿದರು. ಊರಿನ ಗಣ್ಯರು ಹಾಗು ಯುವಕ ಮಂಡಲದ ಸರ್ವ ಸದಸ್ಯರು ಈ‌‌ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯುವಕ‌ ಮಂಡಲದ ಹಿರಿಯ ಸದಸ್ಯರಾದ ಶ್ರೀ ಯತಿರಾಜ್ ಶೆಟ್ಟಿ ಸಂಪಿಲ, ಶ್ರೀ ನಿತೇಶ್ ಶೆಟ್ಟಿ ಸಂಪಿಲ ಹಾಗು ಶ್ರೀ ಶಿಶನ್ ಕೌಡೂರು ಕಾರ್ಯ ಕ್ರಮ ನಿರೂಪಿಸಿದರು


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಸಂಪನ್ನಗೊಂಡ ಗಣೇಶ ಚತುರ್ಥಿಯ‌ ಕ್ರೀಡಾ ಕೂಟ

ಯುವಕ‌ ಮಂಡಲ (ರಿ.) ಇರಾ ಇದರ ವತಿಯಿಂದ‌ ನಡೆದ 49 ನೇ‌ ವರ್ಷದ ಕ್ರೀಡಾ ಕೂಟ ಇರಾ ಶಾಲಾ ಮೈದಾನದಲ್ಲಿ ನಡೆಯಿತು.‌ ಮಕ್ಕಳಿಗೆ ಹಾಗು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಗು ತೀರ್ಪುಗಾರರಾಗಿ ಭಾಗವಹಿಸಿದ ಶ್ರೀ ಅಶೋಕ್ ನಾಯಕ್ ನಾಡಾಜೆ ಅವರು ಯುವಕ ಮಂಡಲದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಮಾರೋಪ ಸಮಾರಂಭದಲ್ಲಿ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಜಯರಾಮ್ ಪೂಜಾರಿ, ಕಾರ್ಯದರ್ಶಿ ಗಳಾದ ಗಣೇಶ್ ಕೊಟ್ಟಾರಿ, ಇರಾ ಶ್ರೀ ಸೋಮನಾಥೇಶ್ವರ ಸೇವಾ‌ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಕುಂಡಾವು, ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸೂರ್ಯಪ್ರಕಾಶ್ ರೈ, ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ, ಶ್ರೀ ರಮೇಶ್ ಪೂಜಾರಿ, ಇರಾ ಶಾಲಾಭಿವೃದ್ದಿ ಸಮಿತಿಯ ಶ್ರೀ ಹಬೀಬ್ ರಹಿಮಾನ್ , ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಹಾಗು ಯುವಕ ಮಂಡಲದ ಸರ್ವಸದಸ್ಯರು ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ನಿತೇಶ್ ಶೆಟ್ಟಿ ಹಾಗು ವರದರಾಜ‌ ಎಂ ಇವರು ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ ಮಂಡಲ(ರಿ.) ಇರಾ ಇದರ 48ನೇ ವಾರ್ಷಿಕೋತ್ಸವದ ಕರೆಯೋಲೆ

ಯುವಕ‌ ಮಂಡಲ(ರಿ.) ಇರಾ ಇದರ 48 ನೇ ವಾರ್ಷಿಕೋತ್ಸವ ಇದೇ ಬರುವ ತಾರಿಕು 11-12-2021ರಂದು ಇರಾ ಯುವಕ ಮಂಡಲದ ವಠಾರದಲ್ಲಿ ನಡೆಯಲಿದ್ದು , ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ 7 ಗಂಟೆಗೆ ಯುವಕ‌ ಮಂಡಲದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಂತರ ಸಭಾ ಕಾರ್ಯಕ್ರಮದಲ್ಲಿ ಇರಾ ಗ್ರಾಮದ ಅರಸು ಕುರಿಯಾಡಿತ್ತಾಯಿ ದೈವದ ಅರಸುಕೊಡೆ ಚಾಕರಿಯವರಾದ ಶ್ರೀ ಜನಾರ್ಧನ ಸಪಲ್ಯ ಕೆಂಜಿಲ ಅವರಿಗೆ ಸನ್ಮಾನ ಜರಗಲಿರುವುದು. ಹಾಗೆಯೇ ಮಂಗಳೂರಿನ ಪ್ರಸಿದ್ದ ನಾಟಕ‌ ತಂಡ “ಲಕುಮಿ” ಯ ಕಲಾವಿದರಿಂದ ಪ್ರಸಿದ್ಧ ತುಳು ಹಾಸ್ಯಮಯ ನಾಟಕ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೆ ಸ್ವಾಗತ ಕೋರುವ ಯುವಕ‌ ಮಂಡಲ(ರಿ) ಇರಾ


1 ಟಿಪ್ಪಣಿ

ಬಾಲ್ಯದ ಜೀವನದ ಸುಮಧುರ ಕ್ಷಣಗಳ ಮೆಲುಕು

ನಮ್ಮ ಇರಾ ಗ್ರಾಮದಲ್ಲಿ ನೀವು ಕಳೆದ ಬಾಲ್ಯದ ಕ್ಷಣಗಳನ್ನು ಸುಮಧುರವಾಗಿ ನೆನಪಿಸಿಕೊಂಡ ಸುರೇಶ್ ರೈ ಸಂಪಿಲರವರಿಗೆ ಧನ್ಯವಾದಗಳು. ನಿಮ್ಮ ಅನುಮತಿಯನ್ನು ಕೇಳುತ್ತಾ ನಿಮ್ಮ ಮಾತುಗಳನ್ನು ಪ್ರಕಟಿಸುತ್ತಿದ್ದೇನೆ.

ಧನ್ಯವಾದಗಳೊಂದಿಗೆ

ಸಂಪಾದಕರು, ಯುವಕ ಮಂಡಲ(ರಿ.)ಇರಾ

ನನ್ನ ಆತ್ಮೀಯ ಗೆಳೆಯರೇ,

ನನ್ನ ಮತ್ತು ನನ್ನ ಸಹಪಾಠಿಗಳ ಬಾಲ್ಯದ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಸಮಯದ ಒಂದು ಮೆಲುಕು.
ಅಂದಾಜು 1982ರಿಂದ 1989ರ ಅವಧಿ.

ಈಗಿನ ಆಧುನಿಕ ಯುಗದಲ್ಲಿ ಕೆಲವೇ ದಿನಗಳ, ವಾರದ, ತಿಂಗಳುಗಳ ಹಿಂದೆ ನಮ್ಮ ಅತ್ಯಾಪ್ತ ರೊಂದಿಗೆ ಗೆಳೆಯರೊಂದಿಗೆ ಕಳೆದ ಸಮಯಗಳು ಹಾಗೂ ಮಾಡಿದ ಯಾವುದೇ ಪಾರ್ಟಿಗಳು ಮರೆತು ಹೋಗಿರಬಹುದು. ಆದರೆ ನನಗೆ ಅಚ್ಚಳಿಯದೆ ನೆನಪಾಗಿ ಉಳಿದಿದೆ ಮೂವತ್ತು ವರ್ಷಗಳ ಹಿಂದಿನ ನಮ್ಮ ಪ್ರಾಥಮಿಕ ವಿದ್ಯಾಭ್ಯಾಸದ ಸಮಯದ ಒಡನಾಟಗಳು. ನನಗೆ ಒಂದು ಸಣ್ಣಗೆ ಆಶ್ಚರ್ಯ ಇದು ಹೇಗೆ ಸಾಧ್ಯ ಎಂದು.

ಇವತ್ತಿನ lockdown ಸಮಯದಲ್ಲಿ ಹಿಂದಿನ ನೆನಪುಗಳನ್ನು ನೆನಪಿಸಿಕೊಂಡು ನಮ್ಮ ಜೀವನದಲ್ಲಿ ಬಂದಂತಹ ನಮ್ಮ ಊರಿನ ವ್ಯಕ್ತಿಗಳು, ಅಧ್ಯಾಪಕರುಗಳು, ವ್ಯಾಪಾರಿಗಳು, ಕೃಷಿಕರು,ಕೂಲಿ ಕಾರ್ಮಿಕರು, ಪಡ್ಡೆ ಹುಡುಗರು, ಶೋಕಿವಾಲರು ಹಾಗೂ ಎಲ್ಲರನ್ನೂ ಪುನರ್ ನೆನಪಿಸಿಕೊಂಡ ರಸಕ್ಷಣಗಳು ಹಾಗೇನೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ತವಕ.

ಸರಿಸುಮಾರು 1982 ನೇ ಇಸವಿ,
ಬಾಲ ವಾಡಿಯಲ್ಲಿ ಸಿಗುವ ಸಜ್ಜಿಗೆ ಗಾಗಿ ಸ್ಕೂಲಿಗೆ ರೆಡಿಯಾಗಿ ಬಂದ ಮಕ್ಕಳು ಸಜ್ಜಿಗೆ ಸಿಕ್ಕ ತಕ್ಷಣ ಮನೆಗೆ ಹೋಗಿ ಬಿಡಬೇಕೆನ್ನುವ ಆಸೆ.(ಆಗಿನ ಕಾಲದ ಅತಿಯಾದ ಬಡತನ ಒಂದು ಕಾರಣವಾಗಿದ್ದಿರಬಹುದು,)
ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇರಾ ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಕಳೆದ ಸಮಯಗಳು ಆಹ್ಲಾದಕರ.
ಸ್ಕೂಲಿಗೆ ಬರುವಾಗ ಚಡ್ಡಿ ಶರ್ಟ್ ಹರಿದಿದ್ದರೂ ಯಾವುದೇ ಮುಜುಗರ ಇರಲಿಲ್ಲ. ಆದರೆ ಈಗ ಐರನ್ ಇಲ್ಲದ ಬಟ್ಟೆ ಹಾಕಿದ ಮಕ್ಕಳನ್ನು ಶಾಲೆಯಿಂದ ವಾಪಸ್ಸು ಕಳಿಸಿದ ಎಷ್ಟೋ ನಿದರ್ಶನಗಳಿವೆ.

ತಮ್ಮ ಮನೆಯಿಂದಲೇ ಅಡಿಕೆ,ಕೊಟ್ಟಾಯಿ, ಗೇರುಬೀಜ ಕದ್ದು ಕೊಟ್ಟು ಅದರಲ್ಲಿ ಸಿಕ್ಕ 2-5 ರೂಪಾಯಿಗಳಲ್ಲಿ ರಾಜಾರೋಷವಾಗಿ ಐಸ್ ಕ್ಯಾಂಡಿ ತೆಗೆದು ಚನ್ನಪ್ಪನನ ಅಂಗಡಿಯಿಂದ ಬೆಲ್ಲ ಚಿಕ್ಕಿ ತೆಗೆದುಕೊಂಡು ಸಂಭ್ರಮಿಸಿದ ಗಳಿಗೆ ಅವಿಸ್ಮರಣೀಯ.

ಮೂರನೇ ತರಗತಿಯ ಹತ್ತಿರದ ಹಿಂದಿನ ರೂಮಿನಲ್ಲಿ ದೊಡ್ಡ ಹುಡುಗರು ಮಾಡುತ್ತಿದ್ದ ಸಜ್ಜಿಗೆ
,ದೊಡ್ಡ ಬಾಣಲೆಯಲ್ಲಿ ಬೇಯಿಸಲಾದ ಸಜ್ಜಿಗೆಗಾಗಿ ಮಕ್ಕಳು ಏಕಾಗ್ರತೆಯಿಂದ ಮಧ್ಯಾಹ್ನದವರೆಗೆ ಕಾಯುತ್ತಿದ್ದ ದಿನಗಳು ಇನ್ನೂ ನೆನಪಿದೆ.

ಒಂದನೇ ಕ್ಲಾಸಿನ ಟೀಚರ್ ಆದ ಕಲಾವತಿ ಟೀಚರ್ ಮೂರನೇ ಇದ್ದಂತಹ ಕೃಷ್ಣಪ್ಪ ಕೊಟ್ಟಾರಿ ಮತ್ತು ಬೆನ್ನಿಗೆ ಬೀಳುತ್ತಿದ್ದ ಅವರ ದಬ ದಬ ಏಟುಗಳು ಹಾಗೂ ವೆಂಕಪ್ಪ ಮಾಸ್ತರರ ತಲೆ ಕುಟ್ಟಿ ಏಟುಗಳು ಯಾರು ಎಂದೂ ಮರೆಯಲಾಗದ ಅನುಭವಗಳು.

ವೆಂಕಪ್ಪ ಮಾಸ್ತರರ ಕುಟ್ಟಿ ಹಾಗೂ ಅವರ ಎಲೆ-ಅಡಿಕೆ ಜಗಿಯುವ ಅಭ್ಯಾಸ ಮಕ್ಕಳೆಲ್ಲರಿಗೂ ಚಿರಪರಿಚಿತ. ಕ್ಲಾಸಿನಲ್ಲಿ ಅಪ್ಪಿತಪ್ಪಿ ನಕ್ಕರೆ ತಲೆ ಕುಟ್ಟಿ ಗ್ಯಾರೆಂಟಿ.

ಸಾಧಾರಣವಾಗಿ ಸ್ಕೂಲಿಗೆ ಲೇಟಾಗಿ ಬರುವ ಕೃಷ್ಣಪ್ಪ ಕೊಟ್ಟಾರಿ ಮಾಸ್ತರರನ್ನು (ಹಿಂದಿನ ದಿನ ರಾತ್ರಿ ಕೋಳಿ ಅಂಕಕ್ಕೆ ಹೋಗಿ ಬಂದಿರುವುದರಿಂದ) ಅವರು ತರಗತಿಯಲ್ಲಿ ಹೇಗಿರಬಹುದು ಎಂಬುದನ್ನು ಯಾರು ಉಳಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಕೋಳಿ ಹೋದರೆ ಮರುದಿವಸ ಅದರ ಪರಿಣಾಮ ಮಕ್ಕಳ ಬೆನ್ನಿನ ಮೇಲೆ ಆಗುವುದು ಗ್ಯಾರೆಂಟಿ.

ಮುಂದುವರಿದು 5ನೇ ತರಗತಿಯಲ್ಲಿ ಶ್ರೀಧರ ಮಾಸ್ತರರ ಗಣಿತ ತರಗತಿ ನಮಗೆ ಈಗಲೂ ಕೂಡಿಸು ವಿಭಾಗಿಸುವುದು ಕಳಿಯು ಭಾಗಿಸು,ಎಲ್ಲದಕ್ಕೂ ಮೂಲ.

ಅವರ ಕಿವಿ ಹಿಡಿದು ಜಗ್ಗುವ ರೀತಿ ನೋಯಿಸುವ ಒಂದು ವಿಧ ಸಾಮಾನ್ಯ ಜನರಿಗೆ ಕೈಗೆಟುಕದ್ದು.

ಆರನೇ ತರಗತಿಯಲ್ಲಿ ಅಯ್ತಪ್ಪ ಮಾಸ್ಟರರ ಉಗ್ರ ನರಸಿಂಹ ಅವತಾರ ಈಗಲೂ ನೆನಪಿದೆ.
ಎಲ್ಲಾ ಮಕ್ಕಳಿಗೆ ಅತ್ಯಂತ ಭಯ ತರಿಸುವ ಮಾಸ್ತರ್ ಅಂದ್ರೆ ಅದು ಅಯ್ತಪ್ಪ ಮಾಸ್ತರರು. ಅವರ ಮುಖದ ಉಗ್ರರೂಪ, ನಗುವೇ ಕಾಣದ ಚಹರೆ ಯಾವ ಮಕ್ಕಳನ್ನು ಭಯ ತರಿಸದೆ ಇರದು.
ಭೀಕರವಾಗಿ ಹೊಡೆಸಿಕೊಂಡ ಪ್ರದೀಪ ಮತ್ತು ಕೇಶವ ಅಯ್ತಪ್ಪ ಮಾಸ್ತರರ ಉಗ್ರ ಅವತಾರಕ್ಕೆ ಈಗಲೂ ಸಾಕ್ಷಿ.

ಮುಖ್ಯೋಪಾಧ್ಯಾಯರಾದ ಅತ್ಯಂತ ಸಂಯಮದ ಊರಿನ ಮಹಾಬಲ ಮಾಸ್ತರರು ಎಲ್ಲರಿಗೂ ರೋಲ್ ಮಾಡೆಲ್.

ಪ್ರತಿದಿನ ಬೆಳಿಗ್ಗೆ ಸ್ಕೂಲ್ಗೆ ಬರುವಾಗ ಮಹಾಬಲ ಮಾಸ್ತರರ ಬ್ಯಾಗ ಪುಸ್ತಕ ಹಿಡಿದುಕೊಂಡು ಹಿಂದಿನಿಂದ ಬರುವುದು ನನಗೆ ಕೊಟ್ಟಂತಹ ಜವಾಬ್ದಾರಿ. ಅವರ ಮನೆಯಿಂದ ತಿಂಡಿ ತಿಂದು ಬೆಳಿಗ್ಗೆ ಅವರ ಮನೆಯಿಂದ ಹೊರಟರೆ 500 ಮೀಟರ್ ದೂರದಲ್ಲಿರುವ ಶಾಲೆಗೆ ತಲುಪುವುದಕ್ಕೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಯಾಕೆಂದರೆ ಅವರು ಏಳು ಹೆಜ್ಜೆ ಮುಂದಿಟ್ಟರೆ ಮತ್ತೆ ಪುನಃ ಆರು ಹೆಜ್ಜೆ ಹಿಂದೆ ಬಂದು ಎರಡು ಸಲ ಕಾಲು ನೆಲಕ್ಕೆ ಕುಟ್ಟಿ ಮುಂದೆ ಹೋಗುತ್ತಿದ್ದರು. ಎಷ್ಟೋ ಮಕ್ಕಳು ಅವರ ನಡಿಗೆಯನ್ನು ಅನುಕರಿಸಿ ತಮಾಷೆ ಮಾಡಿದ್ದು ಮುಚ್ಚಿಡುವ ಸಂಗತಿಯೇನಲ್ಲ.

ಅಯ್ತಪ್ಪ ಮಾಸ್ತರರ ನಂತರ ನಮ್ಮ ಸ್ಕೂಲಿಗೆ ಬಂದಂತಹ ಗೋಪಾಲ ಮಾಸ್ತರರು ಟೆರರ್ ಎಂದೇ ಪ್ರಚಲಿತ. ಅವರ ” ಏಯ್ಯಾರಲ್ಲಿ” ಧ್ವನಿ ಕೇಳಿದರೆ ಸಂಪೂರ್ಣ ಶಾಲಾ ಮಕ್ಕಳು ಸ್ಕೂಲಿನ ಒಳಗಡೆ ಸೇರುತ್ತಿದ್ದರು.

ಡಾಮರೆ ಕಾಣದ ರಸ್ತೆಗಳಲ್ಲಿ ಕಟ ಕಟ ಕಟ ಶಬ್ದ ಮಾಡಿಕೊಂಡು ಗೋಲಿಸೋಡ ದೊಂದಿಗೆ ವ್ಯಾಪಾರಕ್ಕೆ ಅಂಗಡಿ ಅಂಗಡಿಗೆ ಬರುತ್ತಿದ್ದ ಪರಪುವಿನ ನಾಯ್ಕರು, ಮತ್ತು 50 ಪೈಸೆ ಕೊಟ್ಟು ಅಂಗಡಿಯಲ್ಲಿ ಗೋಲಿಸೋಡ ಕುಡಿದಾಗ ಆದ ಆನಂದ ಈಗ ಒಂದು ಫುಲ್ ಬಾಟಲ್ ವಿಸ್ಕಿ ಕುಡಿದರು ಸಿಗುವುದಿಲ್ಲ.

ಪೋಂಯಿಂ ಪೋಂಯಿಂ ಎಂದು ಹಾರ್ನ್ ಹೊಡೆದುಕೊಂಡು ಬುಟ್ಟಿ ತುಂಬಾ ಮೀನು ತುಂಬಿಕೊಂಡು “ಬಂಗುಡೆ ಬೂತಾಯಿ ಕೊಲ್ಲತರು ಬೆರಕೆ” ಹೇಳುತ್ತಾ ಮನೆಮನೆಗೆ ಬರುವ ಮೀನ್ ಕುಂಞ ಬ್ಯಾರಿ ಹತ್ತು ರೂಪಾಯಿ ಮೀನು ತೆಗೆದುಕೊಂಡರೆ ಮೂವತ್ತು ಸಲ ಕಣ್ಣು ಮುಚ್ಚದೆ ಕೊಡುತ್ತಿರಲಿಲ್ಲ.

ದಸರಾ ರಜೆಯಲ್ಲಿ ಮನೆ ಮನೆಗೆ ಬರುವ ನಾರಾಯಣ ಪೂಜಾರಿ ಮತ್ತು ಮಾಯಿಲ ರವರ ಕೊಳಲೂದುತ್ತಾ ಬರುವ ಕೊರಗ ವೇಷ, ಶಾರ್ದೂಲ, ಹುಲಿ ಮತ್ತು ಸಿಂಹ ಬೇಟೆಯಾಡುವ ವೇಷಗಳು ಹಾಗೂ ಅದರ ಹಿಂದೆ ಎರಡು ಮೂರು ಕಿಲೋಮೀಟರ್ ಹಿಂಬಾಲಿಸಿಕೊಂಡು ಹೋಗಿ ವಾಪಸ್ಸು ಬರುವುದಕ್ಕೆ ದಾರಿ ಗೊತ್ತಾಗದೆ ಒದ್ದಾಡಿದ ಕ್ಷಣಗಳು ಈಗ ಹಿತವೆನಿಸುತ್ತದೆ.

ಮತ್ತೊಬ್ಬರು ಇಡೀ ಸ್ಕೂಲಿಗೆ ಊರಿಗೆ ಮರೆಯಲಾಗದಂತಹ ಒಂದು ಜೀವ ಶ್ರೀಯುತ ರಾಮಣ್ಣ ಕೊಟ್ಟಾರಿಯವರು. ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಾ ದಾನ ಧರ್ಮವನ್ನು ಮಾಡುತ್ತಾ ಬಲ ಹೀನರಿಗೆ ಸಹಾಯ ಹಸ್ತ ಚಾಚಿದ ಮಹಾನ್ ಚೇತನ.

ಸ್ಕೂಲಿನ ಸೈಡಿನಲ್ಲಿ ಇರುವ ರಾಮಣ್ಣ ಕೊಟ್ಟಾರಿಯವರ ನೆಲ್ಲಿಕಾಯಿ ಮರ ಮಕ್ಕಳೆಲ್ಲರ ಅತ್ಯಂತ ನೆಚ್ಚಿನ ಜಾಗ.

ಶಾಲೆಯಲ್ಲಿ ನಡೆಯುತ್ತಿದ್ದಂತಹ ಸ್ವಾತಂತ್ರ್ಯೋತ್ಸವದ ಸಂಭ್ರಮ ಭಜನಾ ಮಂಗಲೋತ್ಸವ ಯಾವುದೇ ಕಾರ್ಯಕ್ರಮಗಳಿರಲಿ ಇರಲಿ ಸಿಹಿತಿಂಡಿ ಕೊಡುಗೆ ಶ್ರೀಯುತ ರಾಮಣ್ಣ ಕೊಟ್ಟಾರಿ ಮತ್ತು ಶ್ರೀಯುತ ಬಂಟಪ್ಪ ಕೊಟ್ಟಾರಿ ಇವರುಗಳಿಂದಲೆ. ಯಾಕೆಂದರೆ ಅವರು ಶ್ರೀಮಂತರು ಹೃದಯದಲ್ಲಿ ಕೂಡ.

ಸ್ಕೂಲಿನಲ್ಲಿ ಇದ್ದಂತಹ ಕಿಶೋರ್ ಶೆಟ್ಟಿ,ಅಬ್ದುಲ್ ರಜಾಕ್, ಖಾದ್ರಿ ಎಂಬ ವಿದ್ಯಾರ್ಥಿಗಳು ಮಾಡುತ್ತಿದ್ದ ಚಮತ್ಕಾರ ನನ್ನನ್ನು ಬೆರಗುಗೊಳಿಸುತ್ತಿತ್ತು.

ಮಂಗಳ ಕುಂಡಾವು ಹಾಡುವ ಹಾಡುಗಳು,ರಮೇಶ್ ಶೆಟ್ಟಿ, ಜಯರಾಜ, ಬಶೀರ್, ಅಬ್ದುಲ್ಲಾ ಇವರ ಅಮೋಘ ಕಬಡ್ಡಿ ಆಟಗಳು ನಮ್ಮ ಶಾಲೆಗೆ ಹಲವಾರು ಪ್ರಶಸ್ತಿಗಳನ್ನು ತಂದೆ ಕೊಟ್ಟಿರುವುದು ಈಗಲೂ ನೆನಪಿದೆ.

ವರ್ಷಕ್ಕೊಮ್ಮೆ ನಡೆಯುತ್ತಿದ್ದ ಇಂಟರ್ಸ್ಕೂಲ್ ಗೇಮ್ಸ್ ಅಂಡ್ ಸ್ಫೋರ್ಟ್ಸ್ ಪಂದ್ಯಾವಳಿಗಳಲ್ಲಿ ಬೇರೆ ಬೇರೆ ಶಾಲೆಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳು, ಕಬ್ಬಡ್ಡಿ,ಡೊಂಕ,ರಿಂಗ್ ಎಸೆಯುವ ಆಟ, ಕೋಕೋ ಆಟವಾಡಿ, ಮುಗಿದ ಬಳಿಕ ವಿಜೇತರಾದ ನಮ್ಮ ಶಾಲಾ ತಂಡದ ಪರ “ಕರಿಯ ಪದಕ ಯಾರಿಗೆ ನಮ್ಮ ಇರಾ ಶಾಲೆಗೆ” ಎಂದು ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದ ಹಾದಿ ನನಗೆ ಅಚ್ಚಳಿಯದ ನೆನಪಾಗಿ ಉಳಿದಿವೆ.

ಊರಿನ ಕುಂಡಾವು ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಯಾವುದೇ ಪೂಜಾ ಜಾತ್ರಾ ಸಮಾರಂಭಗಳಿರಲಿ ಇರಾ ಶಾಲಾ ಮಕ್ಕಳು ಓಡಿಕೊಂಡು ಹೋಗಿ ಮಧ್ಯಾಹ್ನ ಊಟ ಮಾಡಿ ಬರುವುದು ಮತ್ತು ಅದರ ಊಟದ ಕೈ ಪರಿಮಳ ಇನ್ನೂ ಇದೇಯೆನೋ ಅನಿಸುತ್ತಿದೆ. ದೇವಸ್ಥಾನದ ಎದುರಿನ ಪುನರ್ಪುಳಿ ಮರದಿಂದ ದೊಡ್ಡ ಮಕ್ಕಳು ಹತ್ತಿ ಉದುರಿಸುವ ಪುನರ್ಪುಳಿ ತಿನ್ನುವುದು ಅಭ್ಯಾಸವಾಗಿಬಿಟ್ಟಿತ್ತು.

ಸಂಜೆ 5 ಗಂಟೆಗೆ ಬೆಲ್ಲು ಹೊಡೆದ ತಕ್ಷಣ ಓಡಿಕೊಂಡು ಹೋಗಿ ಇನ್ನೊಂದು ಬೆಲ್ಲು ಹೊಡೆಯುವ ಸೊಸೈಟಿ ಹತ್ತಿರ ಇರುತ್ತಿದ್ದ ಐಸ್ಕ್ಯಾಂಡಿ ಮಾರುವ ಮಹಮ್ಮದ್ ಸಾಯಿಬರ ಡಬ್ಬದ ಪಕ್ಕ ನಿಂತುಕೊಳ್ಳುವುದು “ಒಂದು ತಿಂದರೆ ಏನು ತೊಂದರೆ” ಎಂಬ ಅವರ ಟ್ರೇಡ್ ಮಾರ್ಕ್ ಸ್ಲೋಗನ್ ಎಲ್ಲರಿಗೂ ಚಿರಪರಿಚಿತ. ಸ್ವಲ್ಪ ಹಣ ಇದ್ದ ಮಕ್ಕಳು ಐಸ್ಕ್ಯಾಂಡಿ, ಬೆಲ್ಲ ಕ್ಯಾಂಡಿ, ದೂದ್ ಕ್ಯಾಂಡಿ,ಲಾಲಿ ಕೊಂಡುಕೊಂಡು ಚೀಪುತ್ತಾ ಹೋಗುತ್ತಿರುವಾಗ ಕೊನೆಗೆ ಡಬ್ಬದ ಕೆಳಗಿನ ನೀರಾದ ಕ್ಯಾಂಡಿಗಳನ್ನು ಕೊಡುತ್ತಾರೆ ಎಂಬ ಆಸೆಯಿಂದ ಐಸ್ ಕ್ಯಾಂಡಿ ಸಾಹೇಬರು ಹೋಗುವ ತನಕ ಇರುವುದು ನಮಗೇನು ಕಷ್ಟದ ಕೆಲಸವಾಗಿರಲಿಲ್ಲ.

1984 ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಸಾವಿನ ನಂತರ ಇರಾ ಶಾಲೆಯಲ್ಲಿ ಇಂದಿರಾಗಾಂಧಿ (ಚಂದ್ರಹಾಸ ಕರ್ಕೇರ ಮತ್ತು ಬಳಗ) ಅಭಿಮಾನಿಗಳು ಮಾಡಿದಂತಹ ಸಾವಿನ ಊಟದಲ್ಲಿ ಗಡದ್ದಾಗಿ ಉಂಡ ನೆನಪು ಅಚ್ಚಳಿಯದೆ ನಿಂತಿದೆ.

ದೊಡ್ಡ ಹುಡುಗರು ಮಾಡುತ್ತಿದ್ದಂತ ರಾಗಿಂಗ್ ಏನು ಕಡಿಮೆಯೇನಲ್ಲ. 25 ಪೈಸೆ 50 ಪೈಸೆ ಲಕ್ಕಿಡಿಪ್ ಮಾಡಿ ಸಣ್ಣ ಹುಡುಗರಿಗೆ ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳುವಂತೆ ಮಾಡಿ ಐದು ಹತ್ತು ರೂಪಾಯಿ ಗಳಿಸಿ ಪ್ರಥಮ ಬಹುಮಾನವಾಗಿ ಮನೆಯಿಂದ ತಂದ ಲೋಟ ಅಥವಾ ಒಂದು ಪೆನ್, ಪೆನ್ಸಿಲ್ ಕೊಟ್ಟು ಉಳಿದ ಹಣದಲ್ಲಿ ಐಸ್ ಕ್ಯಾಂಡಿ ತಿಂದಿದ್ದು ಕಡಿಮೆ ಸಲವೇನಲ್ಲ.

ಮಧ್ಯಾಹ್ನದ ಹೊತ್ತು ಯಾರದೋ ಗುಡ್ಡದಿಂದ ಕದ್ದ ಗೇರುಬೀಜ ಮತ್ತು ಮುಂಡಪ್ಪಣ್ಣ ಟೈಲರ್ ಅಂಗಡಿ ಎದುರಿನ ದೊಡ್ಡ ನೆಕ್ಕರೆ ಮಾವಿನ ಮರಕ್ಕೆ ಕಲ್ಲು ಬಿಸಾಡಿ ಮಾವಿನಕಾಯಿಯನ್ನು ಚಡ್ಡಿಯ ಕಿಸೆಯೊಳಗೆ ಹಾಕಿದಾಗ ಅದರ ಸುನೆಯಿಂದ ತೊಡೆಯಲ್ಲಿ ಚರ್ಮ ಸುಟ್ಟು ಆಗುತ್ತಿದ್ದ ನೋವು ಕಡಿಮೆ ಕಷ್ಟವೇನಾಗಿರಲಿಲ್ಲ.

ಊರಿನ ದೈವವಾದ ಶ್ರೀ ಕುರಿಯಾಡಿತ್ತಾಯ ದೈವದ ಕಲ್ಲಾಡಿ ನೇಮಕ್ಕೆ ಹೋಗಿ ಗುಡುಗುಡು ಆಡಿ, ಇದ್ದ ಒಂದೆರಡು ರೂಪಾಯಿ ಹೋದರೆ ಆಟದ ಮಾಲೀಕ ಪಿಲಿ ಬ್ಯಾರಿ ಇವರಿಂದ ಒಂದು ರೂಪಾಯಿ ವಾಪಸ್ ಕೇಳಿ ಪಡೆದು ಒಂದು ಮಾಂಞಣ್ಣನ ,(ಆನಂದಣ್ಣ) ಸಂತೆ ಅಂಗಡಿಯಿಂದ ಒಂದು ಗ್ಲಾಸ್ ದಪ್ಪ ಸೋಜಿ ಕುಡಿದು, ದೊಡ್ಡ ಸೇಬಿನ ಹಣ್ಣಿನ ಆಕಾರದಲ್ಲಿರುವ ಗಿಜಿಗಿಜಿ ಬಲೂನ್ ತಗೊಂಡಾಗ ಸಿಕ್ಕ ಅನುಭವ ಈಗ ಯಾವ ಅಮ್ಯೂಸ್ಮೆಂಟ್ ಪಾರ್ಕ್ನಲೂ ಸಿಗಲಾರದು.

ಕೋಯ ಮೊಮ್ಮದ್ ಬ್ಯಾರಿ ಅವರ ಸೈಕಲ್ ಬಾಡಿಗೆಗೆ ಕೊಡುವ ಅಂಗಡಿಯಿಂದ ಗಂಟೆಗೆ 50 ಪೈಸೆ ಕೊಟ್ಟುಸೈಕಲ್ ತೆಗೆದುಕೊಂಡು ಹೋಗಿ ವಾಪಸ್ ಕೊಟ್ಟಾಗ ಏನೋ ಅದ್ಭುತ ಸಾಹಸ ಮಾಡಿದ ಅನುಭವ.

ಚನ್ನಪ್ಪನನ ಹುಲ್ಲುಹಾಸಿದ ಆಂಬ್ಲೆಟ್ ಅಂಗಡಿ, ಚಂದುವಣ್ಣನ ಹೋಟೆಲ್, ಮಾಞಂ ಅಣ್ಣನ ದೊಡ್ಡ ಅಂಗಡಿ, ಮುಂಡಪ್ಪಣ್ಣನ ಟೈಲರ್ ಶಾಪ್, ಬಿಎಂ ರಾಮಣ್ಣನ ಬೀಡಿ ಬ್ರಾಂಚ್, ಆನಂದ್ಣ್ನ ಸಾರಾಯಿ ಅಂಗಡಿಗಳ ಸುತ್ತ ಮುತ್ತ ದಿನಕ್ಕೆ ಒಂದು ಸಾರಿ ತಿರುಗಾಡ ದಿದ್ದರೆ ದಿನವೇ ಅಪೂರ್ಣ ಎನಿಸುತ್ತಿತ್ತು.

ಮನೆಮನೆಗೆ ಸೀರೆ ಮಾರಿಕೊಂಡು ಬರುವ ಮಧುರೆಯವ, EMIನಲ್ಲಿ ಸೀರೆ ಕೊಂಡುಕೊಳ್ಳುತ್ತಿದ್ದ ಊರಿನ ಹೆಂಗಸರು, ಹಾಗೇನೆ ದೇವಸ್ಥಾನದ ಹರಕೆಯ ಅಕ್ಕಿ ಸಂಗ್ರಹಣೆಗೆ ಮನೆ ಮನೆಗೆ ಬರುತ್ತಿದ್ದ ರುಕ್ಮಯ ಮತ್ತು ರವಿ ಪುರುಷರ ನೆನಪು ಮಾಸಲಾರದು.

ಶಾಲಾ ಮೈದಾನದಲ್ಲಿ ನಿಲ್ಲುವ ನವದುರ್ಗ ಬಸ್ ಅದರ ಕ್ಲೀನರ್ ಡ್ಯಾನ್ಸರ್ ಕುಮಾರಣ್ಣ, ನಾವು ಬಸ್ಸು ಮುಟ್ಟಿದರೆ ಅವರೇ ಮಾಲಕ ಎಂಬಂತೆ ಗದರಿಸುತ್ತಿದ್ದ, ಬಸ್ಸಿನ ಒಳಗಡೆ ಜೋರಾಗಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡುತ್ತಿದ್ದ ಕುಮಾರಣ್ಣನ ನೆನಪು ಮರೆಯಲಸಾಧ್ಯ.

ರಾಮಣ್ಣ ಕೊಟ್ಟಾರಿ ಅವರ ಸ್ಟೋರ್ಗೆ ಹೋದಾಗ ಪಕ್ಕದ ರೂಮಲ್ಲಿ ಇದ್ದ ಪೋಸ್ಟ್ ಆಫೀಸಿನಿಂದ ಕೇಳುವ ಢಕ ಢಕ ಢಕ ಸೀಲ್ ಹಾಕುವ ಶಬ್ದ ಇನ್ನು ಅಚ್ಚಳಿಯದೆ ಕೇಳಿಸಿದಂತಿದೆ. ಊರಿಡೀ ತಿರುಗಿ ಪೋಸ್ಟ್, ಪೋಸ್ಟ್ ಇಂದು ಸ್ಪೀಡಾಗಿ ಸೈಕಲಲ್ಲಿ ಬರುವ ಸುರೇಶಣ್ಣ “ಕಾಗದ ಉಂಟಾ” ಎಂದು ಅವರಲ್ಲಿ ಕೇಳದಿದ್ದರೆ ಏನೋ ಕಳಕೊಂಡ ಅನುಭವ ಆಗುತ್ತಿತ್ತು.

ಇಡೀ ಊರಿಗೆ ಒಬ್ಬರೆ ಡಾಕ್ಟರ್ /ಕಂಪೌಂಡರ್ ದಪ್ಪ ಕನ್ನಡಕದ ಕುಬೆ ತೋಟ ಸದಾಶಿವಣ್ಣ. ಯಾರೇ ಅವರ ಹತ್ತಿರ ಹೋದರು ಅವರಲ್ಲಿ ಇರುತ್ತಿದ್ದುದು ಮೂರು ತರದ ಮಾತ್ರೆ ಮತ್ತು ಒಂದು ತರದ ದಪ್ಪ ಕೆಂಪುಬಣ್ಣದ ಕುಡಿಯುವ ಕಷಾಯ. ಆದರೆ ಅವರ ಕೈಗುಣ ಬಹಳ ಚೆನ್ನಾಗಿತ್ತು ಯಾರು ಸಣ್ಣ ಸಣ್ಣ ಶೀತಜ್ವರ ಗಳಿಗೆ ದೊಡ್ಡ ಪಟ್ಟಣಗಳಿಗೆ ಹೋದ ಉದಾಹರಣೆಗಳಿಲ್ಲ. ರಾತ್ರಿ ಎಷ್ಟು ಹೊತ್ತಾದರೂ ಅವರ ಮನೆಗೆ ಹೋಗಿ ಕರೆದರೆ ಆಪದ್ಬಾಂಧವನಂತೆ ಬಂದು ಉಪಚರಿಸುತ್ತಿದ್ದರು. ಅದು ಅವರ ಮೇಲಿನ ಅಭಿಮಾನವನ್ನು ಇಮ್ಮಡಿಗೊಳ್ಳಲು ಕಾರಣ.

ಪೇಪರ್ ಹೆಕ್ಕುತ್ತಾ ಉದ್ದ ಕೂದಲು ಬಿಟ್ಟುಕೊಂಡು ಅಷ್ಟೇನು ಸ್ವಚ್ಛವಲ್ಲದ ಪ್ಯಾಂಟ್ ಮತ್ತು ಶರ್ಟ್ ಹಾಕಿಕೊಂಡು ದಿನಕ್ಕೊಮ್ಮೆ ದರ್ಶನ ಕೊಡುವ ನಿರುಪದ್ರವಿ ” Yejju” ನಮ್ಮ ದಿನಚರಿಯ ಭಾಗವಾಗಿದ್ದ.

ಸ್ವಲ್ಪ ಕೂದಲು ಉದ್ದವಾದರೆ,”Yejju ನೆಲಕ ತೋಜುವ” ಎಂದು ಗದರಿಸಿ ಮನೆಯವರು ವೆಂಕಪ್ಪ ಭಂಡಾರಿ ಅವರ ಸಲೂನ್ ಗೆ ಕರೆದುಕೊಂಡು ಹೋಗಿ ಕೂದಲು ತೆಗೆಸಿ ಬಿಡುತ್ತಿದ್ದರು.

ಶಾಲಾ ವಾರ್ಷಿಕೋತ್ಸವದ ದಿವಸವಂತು ಅದ್ಭುತ ಮನರಂಜನೀಯ ಅನುಭವ. ಸ್ಟೇಜಿನ ಎದುರು ಸಣ್ಣ ಮಕ್ಕಳಿಗೆ ಕೂರಲು ಹಸಿ ಮತ್ತು ಒಣಗಿದ ಬಾಳೆ ತಂದು ಗುಡ್ಡೆಹಾಕಿ ಸುಖಾಸೀನ ಸಿದ್ಧಪಡಿಸುತ್ತಿದ್ದೇವು.

ಸಂಜೆ 7 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮಗಳು ಪ್ರಶಸ್ತಿಪ್ರದಾನ ಹಾಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗೀದು ಊರಿನ ಯುವಕ ಸಂಘದ ನಾಟಕ ಮುಂತಾದ ಕಾರ್ಯಕ್ರಮಗಳು ಮುಗಿಯುವ ಹೊತ್ತಿಗೆ ಸೂರ್ಯ ಮೇಲೆ ಎದ್ದು ಬೆಳಗಾಗುತ್ತಿತ್ತು. ಯಾವುದೇ ಪ್ರಶಸ್ತಿಗಳು ಬರಲಿ ಎದೆಯುಬ್ಬಿಸಿ ‌ ವೇದಿಕೆಗೆ ನಡೆದು ಮನೆಯವರ ಎದುರು ಅತಿಥಿಗಳಿಂದ ಪ್ರಶಸ್ತಿ ಪಡೆದು ಬರುವಾಗ ವಿಶ್ವವನ್ನೇ ಜೈಸಿದ ಅನುಭವವಾಗುತ್ತಿತ್ತು.

ರಾತ್ರಿ10:00 ಗಂಟೆಗೆ ಪ್ರಾರಂಭವಾಗುವ ಯುವಕ ಸಂಘದವರ ಕಾರ್ಯಕ್ರಮಗಳು ನಮ್ಮೆಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿಸುತ್ತಿತ್ತು. ವೈ ಬಿ ಸುಂದರ್ ಅವರ ನಟನೆ, ಸುರೇಶ್ ಕೊಟ್ಟಾರಿ ಅವರ ಖಳನಾಯಕ, ಜಯರಾಮ್ ಪೂಜಾರಿಯವರ ಹೆಣ್ಣಿನ ಮಾನಭಂಗ ಮಾಡುವ ನಟನೆ ಭಯ ತರಿಸುತ್ತಿತ್ತು, ಸತೀಶ್ ಕೊಟ್ಟಾರಿಯವರ ಹೆಣ್ಣಿನ ವೇಷ, ಜಗದೀಶ್ ಶೆಟ್ಟಿ ಅವರ ಗಂಭೀರ ಪಾತ್ರ, ನಾಗೇಶ್ ಪೂಜಾರಿ ಮತ್ತು ದೇಜಪ್ಪ ಪೂಜಾರಿ ಅವರ ಹಾಸ್ಯಭರಿತ ಮಾತುಗಳು, (ಈಗಿನ ದೇವದಾಸ್ ಕಾಪಿಕಾಡ್ ಮತ್ತು ನವೀನ್ ಡಿ ಪಡೀಲ್ ರಂತೆ ಖ್ಯಾತಿಯನ್ನು ಪಡೆದಿದ್ದರು), ಪದ್ಮರಾಜ್ ಕರ್ಕೇರ ರವರ ಪಾದರಸದಂತಹ ನಾಯಕತ್ವ, ಯತಿರಾಜ್ ಶೆಟ್ಟಿ ಅವರ ನವಿರಾದ ನಿರೂಪಣೆ ಗಳು ನಮ್ಮೆಲ್ಲರನ್ನು ಮನ ರಂಜಿಸುತ್ತಿತ್ತು.

ಮನೆಮನೆಯಲ್ಲಿ ಟಿವಿ ಇಲ್ಲದೆ ಇದ್ದಿದ್ದರಿಂದ ಇರಾ ಶಾಲಾ ಮೈದಾನದಲ್ಲಿ ಟಿವಿ ಹಾಕಿ ಸಿನಿಮಾ ತೋರಿಸುತ್ತಿದ್ದರು ಅದಕ್ಕೆ ತುಂಬಾ ಜನ ಮಕ್ಕಳು ಮನೆಯವರೊಂದಿಗೆ ಬಂದು ಸೇರುತ್ತಿದ್ದರು. ಉತ್ಸಾಹದ ಚಿಲುಮೆ ಯಾದ ಯತಿರಾಜ್ ಶೆಟ್ಟಿ ಅವರು ಸೇರಿದ ಸಣ್ಣ ಜನ ಸಮೂಹದೊಂದಿಗೆ “ಹೆಂಡ್ತಿ ಬೇಕು ಹೆಂಡ್ತಿ ಆವಾ ಎಸ್ಪಿ ಸಾಂಗ್ಲಿಯಾನ ಅವಾ”ಎಂದಾಗ ಹಿಂದಿನ ಪಡ್ಡೆ ಹುಡುಗರ ಗುಂಪೊಂದು ಯೆಂಕ್ ಹೆಂಡ್ತಿ ಬೇಕು, ಹೆಂಡ್ತಿ ಬೇಕು ಎಂದು ಕೂಗಿ ಹೇಳುವ ಮೂಲಕ ಇಡೀ ಜನಸಂದಣಿಯನ್ನು ನಗೆಗಡಲಲ್ಲಿ ತೇಳಿಸುತ್ತಿದ್ದರು.

ಎಪ್ರಿಲ್ 10 ಅತ್ಯಂತ ಕುತೂಹಲದ ದಿನ. ಏಕೆಂದರೆ ಅವತ್ತು ಫಾಸ್ ಪೇಲ್ ದಿನ. ಮುಖ್ಯೋಪಾಧ್ಯಾಯರಾದ ಶ್ರೀಯುತ ಮಹಾಬಲ ಮಾಸ್ತರರು ಆರನೇ ತರಗತಿಯಿಂದ ಒಂದನೇ ತರಗತಿವರೆಗೆ ಪಾಸಾದವರ ಹೆಸರು ಹೇಳಿಕೊಂಡು ಬರುತ್ತಿದ್ದರು. ಯಾರ ಹೆಸರು ಹೇಳಿ ಕೂಗಿದರು ಅವರು ಮುಂದಿನ ತರಗತಿಗೆ ಹೋಗಿ ಓಡಿಕೊಂಡು ಹೋಗಿ ಕೂತುಕೊಂಡು ಮುಂದಿನ ವರ್ಷಕ್ಕೆ ತನ್ನ ಸ್ಥಾನವನ್ನು ಭದ್ರಪಡಿಸಿದ ಖುಶಿಯಿಂದ ಮನಸ್ಸು ಹಿರಿಹಿರಿ ಹಿಗ್ಗುತ್ತಿತ್ತು.

ನಮ್ಮ ಇಂದಿನ ಜೀವನಕ್ಕೆ ಮೂರ್ತರೂಪ ಕೊಟ್ಟ ನಮ್ಮ ಪ್ರಾಥಮಿಕ ಶಾಲಾ ಅಧ್ಯಾಪಕ ವೃಂದ, ಗುರುಹಿರಿಯರಿಗೆ ಶಿರಬಾಗಿ ನಮಿಸು ವುದರೊಂದಿಗೆ, ಅವಕಾಶ ಸಿಕ್ಕರೆ ಮತ್ತೆ ಅದೇ ಸಹಪಾಠಿಗಳೊಂದಿಗೆ ಮತ್ತೊಮ್ಮೆ ಅದೇ ತರಗತಿಯಲ್ಲಿ ಕೂತು ಅಧ್ಯಾಪಕರನ್ನು ಕರೆಸಿ ಸತ್ಕರಿಸಿ ಅರ್ಥಪೂರ್ಣವಾಗಿ ದಿನಕಳೆಯುವ ಯೋಚನೆ ಹೊಂದಿದ್ದೇನೆ.

ಇದನ್ನು ಓದಿ ನಿಮಗೂ ನಿಮ್ಮ ಬಾಲ್ಯದ ನೆನಪುಗಳನ್ನು ಹಂಚುವ ಮನಸ್ಸಾದರೆ, ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ವಂದನೆಗಳು
ಸುರೇಶ್ ರೈ ಸಂಪಿಲ.