ಯುವಕ ಮಂಡಲ (ರಿ.) , ಇರಾ

ಇದು ಯುವ ಶಕ್ತಿಯ ಕೇಂದ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡ‌ ಯುವಕ ಮಂಡಲದ 49ನೇ ವಾರ್ಷಿಕೋತ್ಸವ

ಯುವಕ ಮಂಡಲ (ರಿ.) ಇರಾ ಇದರ 49ನೇ‌ ವಾರ್ಷಿಕೋತ್ಸವ ದಿನಾಂಕ 25-12-2022 ರ ಭಾನುವಾರ ಯುವಕ ಮಂಡಲದ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಮಧ್ಯಾಹ್ನ 3.30 ಕ್ಕೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳದ ದೇವರ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು, ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟದೊಂದಿಗೆ‌ ಸಂಪನ್ನವಾಯಿತು. ವಾರ್ಷಿಕೋತ್ಸವದ ಅಂಗವಾಗಿ‌ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಮಾಲಿಕರಾದ ಶ್ರೀ ದಿವಾಣ ಗೋವಿಂದ ಭಟ್ ಮಾತನಾಡಿ ಯಕ್ಷಗಾನಕ್ಕೂ ಇರಾಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಬಹಳ ವಿಸ್ತೃತವಾಗಿ ವಿವರಿಸಿದರು.‌ನಂತರ ಮಾತನಾಡಿದ ಶ್ರೀ ಗಣೇಶ್ ಮೆಡಿಕಲ್ಸ್ ಕಲ್ಲಡ್ಕ ಇದರ ಮಾಲಿಕರಾದ ಶ್ರೀ ಚಂದ್ರಶೇಖರ ರೈ ಕೊಲ್ಯ, ಯಕ್ಷಗಾನಕ್ಕೂ ಹಾಗು‌ ಯುವಕ‌ ಮಂಡಲಕ್ಕೂ ಇರುವ ನಂಟಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ತಾಲೂಕು‌ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಆರ್ ಕರ್ಕೇರ ಮಾತನಾಡಿ ಯುವಕಮಂಡಲದ‌ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಸ್ತುತ ಕಟೀಲು ಮೇಳದ ಪ್ರಬಂಧಕರಾದ ಶ್ರೀ ಶ್ರೀಧರ ಪೂಜಾರಿ ಪಂಜಾಜೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಯುವಕ‌ ಮಂಡಲದ ಸ್ಥಾಪಕ‌‌ ಸದಸ್ಯರಾದ ಶ್ರೀ ಗೋಪಾಲ ಮಾಸ್ಟರ್ ಕುಂಡಾವು, ಶ್ರೀ ಜನಾರ್ಧನ‌ ಪಕ್ಕಳ ತಾಳಿತ್ತಬೆಟ್ಟು ಇವರನ್ನು ಗೌರವಿಸಲಾಯಿತು. ಅತೀ ಹೆಚ್ಚು ‌ಅಂಕ ಗಳಿಸಿದ ಊರಿನ‌ ವಿದ್ಯಾರ್ಥಿಗಳಿಗೆ ‌ಪ್ರೊತ್ಸಾಹಧನ ನೀಡಲಾಯಿತು. ಯಕ್ಷಗಾನಕ್ಕೆ ಬೆನ್ನೆಲುಬಾಗಿ ನಿಂತು‌ ಸಂಘದ ‌ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ‌ ಪಾಲ್ಗೊಳ್ಳುವ ಸಂಘದ ಸದಸ್ಯರಾದ ಶ್ರೀ ಸ್ಟೀವನ್‌ ಡಿಸಿಲ್ವ ದೈವದಹಿತ್ಲು, ಶ್ರೀ ಅದ್ರಾಮ ಡಿ ಇವರನ್ನು ಗೌರವಿಸಲಾಯಿತು. ಸಂಧರ್ಭದಲ್ಲಿ ಉದ್ಯಮಿ, ಶ್ರೀ ಜಗದೀಶ ಆಳ್ವ ನಾರ್ಯಗುತ್ತು, ಯುವಕ‌ ಮಂಡಲದ ಅಧ್ಯಕ್ಷರಾದ ಶ್ರೀ ಅಶ್ವಿತ್ ಕೊಟ್ಟಾರಿ ಇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭರತ್ ರಾಜ್ ರೈ ಸಂಘದ ವಾರ್ಷಿಕ ವರದಿ ವಾಚಿಸಿದರು, ಶ್ರೀ ಪುಷ್ಪರಾಜ್ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀ ನಿತೇಶ್ ಶೆಟ್ಟಿ ಸಂಪಿಲ ವಂದಿಸಿದರು. ಯತಿರಾಜ್ ಶೆಟ್ಟಿ ಸಂಪಿಲ‌ ಕಾರ್ಯಕ್ರಮ ನಿರೂಪಿಸಿದರು.


ನಿಮ್ಮ ಟಿಪ್ಪಣಿ ಬರೆಯಿರಿ

ಯುವಕ‌ ಮಂಡಲದ‌ 49ನೇ ವಾರ್ಷಿಕೋತ್ಸವದ ಕರೆಯೋಲೆ

ಆತ್ಮೀಯರೇ

ಇದೇ ಬರುವ ತಾರೀಖು 25-12-2022 ರ ಭಾನುವಾರ ಯುವಕ ಮಂಡಲ ( ರಿ.) ಇರಾ ಇದರ 49ನೇ ವಾರ್ಷಿಕೋತ್ಸವದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಇರಾ ಯುವಕ ಮಂಡಲದ ವಠಾರದಲ್ಲಿ ನಡೆಯಲಿದ್ದು, ಸಂಜೆ 3.30 ಗಂಟೆಗೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಯುವಕ ಮಂಡಲದವರೆಗೆ ಮೇಳದ ದೇವರ ಭವ್ಯವಾದ ಮೆರವಣಿಗೆಯು ಸಾಗಲಿದ್ದು, ನಂತರ ಯುವಕ ಮಂಡಲದ ರಂಗ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಂತರ 5.30 ಕ್ಕೆ ಸರಿಯಾಗಿ ಚೌಕಿ ಪೂಜೆ , ಪ್ರಸಾದ ವಿತರಣೆ, 8.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿ ತನು-ಮನ-ಧನ ಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ.

ಅಶ್ವಿತ್ ಕೊಟ್ಟಾರಿ
ಅಧ್ಯಕ್ಷರು
ಯುವಕ ಮಂಡಲ(ರಿ.) ಇರಾ


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷ ವಾಙ್ಮಯಿ, ಅಭಿನಯ ಚಕ್ರವರ್ತಿ ಪುಷ್ಪರಾಜ್ ಕುಕ್ಕಾಜೆ

ಪುಷ್ಪರಾಜ್ ಕುಕ್ಕಾಜೆ ಹವ್ಯಾಸಿ ಯಕ್ಷಗಾನ ಕಲಾವಿದರಲ್ಲಿ ಮೇರುಪಂಕ್ತಿಯ ಕಲಾವಿದರು. 1954 ರಲ್ಲಿ ಸ್ಥಾಪಿತವಾದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳದವರು ಇತ್ತೀಚೆಗೆ ನಡೆಸಿದ ಯಕ್ಷ ವಾಙ್ಮಯ 2020 ಸ್ಪರ್ಧೆಯಲ್ಲಿ ,61 ಸ್ಪರ್ದಿಗಳೆದುರು ಪ್ರಥಮ ಸ್ಥಾನ ಪಡೆದ ಪುಷ್ಪರಾಜರು ಕುಕ್ಕಾಜೆಯ ಹೆಮ್ಮೆ. ಇವರನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದರು ನಿವೃತ್ತ ಮುಖ್ಯೋಪಾಧ್ಯಾಯರಾದ ದಿ.ಮೇರಾವು ಮಹಾಬಲ ರೈಗಳು,ನಾಟ್ಯ ಕಲಿಸಿದವರು ಕಲಾವಿದರಾದ ಶ್ರೀಧರ ಪಂಜಾಜೆ ಇವರು. ಶ್ರೀ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಹಾಗು ಶ್ರೀ ದೂಮಣ್ಣ ರೈ ಕುಕ್ಕಾಜೆ ಇವರ ತಾಳಮದ್ದಳೆ ಗುರುಗಳಾಗಿದ್ದಾರೆ. 1993ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂಧರ್ಭದಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ 77 ಸ್ಪರ್ದಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಇವರ ಪ್ರೌಢಿಮೆಗೆ ಸಾಕ್ಷಿ. ಯಕ್ಷಗಾನ ಮಾತ್ರವಲ್ಲದೆ ನಾಟಕ ರಂಗದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಯಕ್ಷಗಾನ ಸಂಘಟಕರಾಗಿಯೂ, ಕಾರ್ಯಕ್ರಮ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.ಹವ್ಯಾಸಿ ಯಕ್ಷಗಾನ ರಂಗದಲ್ಲಿ 37 ವರ್ಷದ ಸಾರ್ಥಕ ಸೇವೆ ಸಲ್ಲಿಸಿದ್ದು, ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಮಂಚಿ ಘಟಕದ ಮಾರ್ಗದರ್ಶಕರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿದ್ದಾರೆ.ಮಂಚಿ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮಾಡದ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಚಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘವನ್ನು ಮುನ್ನಡೆಸುವಲ್ಲಿ ಇವರ ಸಾಧನೆ ಅಪರಿಮಿತವಾದದ್ದು. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಮಾಜ ಸೇವೆ ಹಾಗು ಕಲಾ ಸೇವೆ ಮಾಡುತ್ತಿರುವ ಶ್ರೀ ಪುಷ್ಪರಾಜ್ ಕುಕ್ಕಾಜೆ ಇವರಿಗೆ ಇರಾ ಯುವಕ ಮಂಡಲದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

 

2cbfd889ca8047629f3537604efa9cdfFB_IMG_1594634045394


ನಿಮ್ಮ ಟಿಪ್ಪಣಿ ಬರೆಯಿರಿ

ಯಶಸ್ವಿಯಾಗಿ ಪ್ರದರ್ಶನಗೊಂಡ ಯುವಕ ಮಂಡಲ ಪ್ರಾಯೋಜಿತ ಯಕ್ಷಗಾನ ಬಯಲಾಟ

ಯುವಕ ಮಂಡಲ(ರಿ.) ಇರಾ ಇದರ ವತಿಯಿಂದ ಗಣೇಶ ಚತುರ್ಥಿ ಯ ಪ್ರಯುಕ್ತ , ಜಿಲ್ಲೆಯ ಸುಪ್ರಸಿದ್ಧ ಕಲಾವಿದರನ್ನೊಳಗೊಂಡ ಯಕ್ಷಗಾನ‌ ” ಪಂಚವಟಿ-ಮಕರಾಕ್ಷ-ಇಂದ್ರಜಿತು” ದಿನಾಂಕ 08-09-2019 ರ ಭಾನುವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಬಹಳ ಅಧ್ದೂರಿಯಾಗಿ ಪ್ರದರ್ಶನಗೊಂಡಿತು. ರಸರಾಗ ಚಕ್ರವರ್ತಿ ಶ್ರೀ ದಿನೇಶ್ ಅಮ್ಮಣ್ಣಾಯ, ಕಂಚಿನ ಕಂಠದ ಶ್ರೀ ಪ್ರಸಾದ್ ಬಲಿಪ, ಯುವ ಭಾಗವತ ಶ್ರೀ ಪ್ರದೀಪ್ ಗಟ್ಟಿ ಯವರ ಸುಮಧುರ ಹಾಡುಗಾರಿಕೆಯೊಂದಿಗೆ , ಮಾತಿನ ಮಲ್ಲ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ, ಅಕ್ಷಯ್ ಕಾರ್ನಾಡ್, ಪೆರ್ಮುದೆ, ರಂಗ ಸವ್ಯಸಾಚಿ ಸಂತೋಷ್ ಮಾನ್ಯ, ಹಾಸ್ಯಗಾರ ಮಹೇಶ್ ಮಣಿಯಾಣಿ, ವೆಂಕಟೇಶ್ ಕಲ್ಲುಗುಂಡಿ, ರಾಜೇಶ್ ಆಚಾರ್ಯ ಸಂಪಿಗೆ, ಪ್ರೇಮ್ ರಾಜ್ ಕೊಯ್ಲ, ಬಜಕೊಡ್ಲು, ಜತಗೆ ಊರಿನ ಪ್ರತಿಭೆ ಅಪತ್ಭಾಂದವ ಶ್ರೀ ಪುಷ್ಪರಾಜ್ ಕುಕ್ಕಾಜೆ ರಂಗಸ್ಥಳ ಅಲಂಕರಿಸಿದರು. ಕಳೆದ ಹತ್ತು ವರ್ಷಗಳಿಂದ ಯುವಕ‌ ಮಂಡಲ ನಡೆಸಿಕೊಂಡು ಬಂದಿರುವ ಈ ಯಕ್ಷಸೇವೆಗೆ ಹಲವು ಧಾನಿಗಳು ನೆರವು‌ ನೀಡಿರುತ್ತಾರೆ. ಈ ದಿನ ಸಂಪೂರ್ಣ ಸಹಕಾರ ನೀಡಿದ ಧಾನಿಗಳಾದ ಶ್ರೀಮತಿ ಮತ್ತು ಶ್ರೀ ಕೇಶವ ಶೆಟ್ಟಿ ಮೇರಾವು, ಕುರಿಯಾಡಿ ತೋಟ ಶ್ರೀಮತಿ ಮತ್ತು ಶ್ರೀ ಸತೀಶ್ ಶೆಟ್ಟಿ , ಶ್ರೀ ಮತಿ ಮತ್ತು ಶ್ರೀ ಚನಿಯಪ್ಪ ನಾಯ್ಕ ಹಾಗು ಸಂಘದ ಸಕ್ರೀಯ ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಕೇಶವ ಭಂಡಾರಿಯವರನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


 


ನಿಮ್ಮ ಟಿಪ್ಪಣಿ ಬರೆಯಿರಿ

ಗಣೇಶ ಚತುರ್ಥಿಯ ಪ್ರಯುಕ್ತ ಇರಾ ಯುವಕ ಮಂಡಲ ಪ್ರಾಯೋಜಿತ ಬಹು ನಿರೀಕ್ಷೆಯ ಯಕ್ಷಗಾನ

ಗಣೇಶ ಚತುರ್ಥಿಯ ಪ್ರಯುಕ್ತ, ಇರಾ ಯುವಕ ಮಂಡಲ(ರಿ) ಇರಾ ಇವರ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 8ರಂದು ಇರಾ ದೇವಸ್ಥಾನದ ವಠಾರದಲ್ಲಿ  ಮಧ್ಯಾಹ್ನ 2 ರಿಂದ ಬಹು ನಿರೀಕ್ಷೆಯ ಕಾರ್ಯಕ್ರಮ ಅದ್ದೂರಿ ಯಕ್ಷಗಾನ ಬಯಲಾಟ ” ಪಂಚವಟಿ-ಮಕರಾಕ್ಷ-ಇಂದ್ರಜಿತು”. ಯಕ್ಷ ರಂಗದ ದಿಗ್ಗಜರ ಕೂಡುವಿಕೆಯಲ್ಲಿ ಹಾಗು ಹತ್ತು ಹಲವಾರು ವಿಶೇಷ ಆಕರ್ಷಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ.

ಯುವಕ ಮಂಡಲ ಇರಾ..

IMG-20190627-WA0004


2 ಟಿಪ್ಪಣಿಗಳು

ಯಶಸ್ವಿಯಾಗಿ ಸಂಪನ್ನಗೊಂಡ ಯುವಕ ಮಂಡಲ ಪ್ರಾಯೋಜಿತ ಇರಾ ಯಕ್ಷೋತ್ಸವ

ಸೆಪ್ಟೆಂಬರ್ 23, 2018ರಂದು ಗಣೇಶ ಚತುರ್ಥಿಯ ಪ್ರಯುಕ್ತ ಯುವಕ ಮಂಡಲ(ರಿ.) ಇರಾ ಇದರ ಸದಸ್ಯರು ಆಯೋಜಿಸಿದ್ದ ಇರಾ ಯಕ್ಷೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಸರಿಯಾಗಿ ಅಪರಾಹ್ನ 2.30ಕ್ಕೆ ಪ್ರಾರಂಭವಾದ ಯಕ್ಷಗಾನ ಮೊದಲಿಗೆ ರಸ ರಾಗ ಚಕ್ರವರ್ತಿ ಶ್ರೀ ದಿನೇಶ್ ಅಮ್ಮಣ್ಣಾಯರ ಭಾಗವತಿಕೆಯಲ್ಲಿ “ಕೃಷ್ಣಾರ್ಜುನ” ಪ್ರಸಂಗ ನಡೆದರೆ, ತದನಂತರ ಸ್ವರ ಗಂಭೀರ  ಶ್ರೀ ಪ್ರಸಾದ್ ಬಲಿಪರ ಭಾಗವತಿಕೆಯಲ್ಲಿ ” ಅಗ್ರಪೂಜೆ” ಪ್ರಸಂಗ ನಡೆಯಿತು. ಎರಡೂ ಪ್ರಸಂಗಗಳಲ್ಲಿ ಜಲ್ಲೆಯ ಸುಪ್ರಸಿದ್ಧ ಕಲಾವಿದರು ಪಾತ್ರವಹಿಸಿ ಜನಮನ್ನಣೆಗಳಿಸಿದರು. ಮೊದಲ ಪ್ರಸಂಗದಲ್ಲಿ ಶ್ರೀ ಕೃಷ್ಣನಾಗಿ ಮಾತಿನ ಮಲ್ಲ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ ಮಿಂಚಿದರೆ, ಅರ್ಜುನನಾಗಿ ಯಕ್ಷ ರಂಗದ ರಾಜ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಜೀವ ತುಂಬಿದರು. ಇವರಿಬ್ಬರಿಗೆ ಜತೆಯಾಗಿ ಶ್ರೀ ಅಕ್ಷಯ್ ಕುಮಾರ್ ಮಾರ್ನಾಡ್ ಸುಭದ್ರೆಯಾಗಿ ರಂಜಿಸಿದರು.  ಅಗ್ರಪೂಜೆ ಪ್ರಸಂಗದಲ್ಲಿ ಯಕ್ಷ ರಂಗದ ಧ್ರುವತಾರೆ ಶ್ರೀ ಸಂತೋಷ್ ಕುಮಾರ್ ಮಾನ್ಯ ಶಿಶುಪಾಲನಾಗಿ ಅಬ್ಬರಿಸಿದರೆ, ಅವರಿಗೆ ಜತೆಯಾಗಿ ಮತ್ತೊರ್ವ ಅಗ್ರಮಾನ್ಯ ಕಲಾವಿದ ರಾಹುಲ್ ಶೆಟ್ಟಿ ಕುಡ್ಲ ದಂತವಕ್ರನಾಗಿ ರಂಗಸ್ಥಳ ಪುಡಿಗೈದರು. ಊರಿನ  ಅಗ್ರಮಾನ್ಯ ಕಲಾವಿದರಾದ ಶ್ರೀ ಪುಷ್ಪರಾಜ್ ಕುಕ್ಕಾಜೆ ಹಾಗು ಶ್ರೀ ಶ್ರೀಧರ ಪಂಜಾಜೆ ಜತೆಗೆ ನಮ್ಮ ಸಂಘದ ಯುವ ಕಲಾವಿದರಾದ ಶ್ರೀ ಗೌರವ್ ಜಿ ಕೊಟ್ಟಾರಿ ಹಾಗು ಶ್ರೀ ಸುಹಾಗ್ ಜಿ ಕೊಟ್ಟಾರಿ ತಮ್ಮ ಪಾತ್ರಗಳಿಗೆ ಜೀವತುಂಬಿ ಜನರ ಮೆಚ್ಚುಗೆಗೆ ಪಾತ್ರರಾದರು.

 


ನಿಮ್ಮ ಟಿಪ್ಪಣಿ ಬರೆಯಿರಿ

ಯಕ್ಷರಂಗದ ಭರವಸೆಯ ಬಹುಮುಖ ಪ್ರತಿಭೆ ಮನ್ವಿತ್

ಇರಾ ಗ್ರಾಮವು ಹಲವು  ಪ್ರತಿಭೆಗಳ ಆಗರ,ಇದಕ್ಕೆ ಸಾಕ್ಷಿಯೆಂಬಂತೆ ನಾವು ಹಲವು ಯುವ ಪ್ರತಿಭೆಗಳನ್ನು ನಮ್ಮೂರಲ್ಲಿ ಕಾಣಬಹುದು. ಈ ಯುವ ಪ್ರತಿಭೆಗಳು ನಮ್ಮ ಯುವಕ ಮಂಡಲದ ಸದಸ್ಯರು ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ.

ಇಂತಹ ಯುವ ಪ್ರತಿಭೆಯಲ್ಲಿ ಇರಾ ಸಂಪಿಲದ ಮನ್ವಿತ್ ವೈ ಶೆಟ್ಟಿ ಒಬ್ಬರು. ದ.ಕ ಗಂಡುಕಲೆ ಯಕ್ಷಗಾನವನ್ನು  ತನ್ನ ಅಭಿರುಚಿ ಮಾಡಿಕೊಂಡು ಯಕ್ಷ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ.

ಇವರು ಮಾಯಾ ಶೂರ್ಪಣಖ ಎಂಬ ಸ್ತ್ರೀ ಪಾತ್ರದಲ್ಲಿ ರಂಗಪ್ರವೇಶ ಮಾಡಿದರು. ಅಂದಿನಿಂದ ಇಂದಿನವರೆಗೆ  ಹಲವಾರು ಸ್ತ್ರೀ ಪುರುಷ ಪಾತ್ರಗಳಿಗೆ ಜೀವ ತುಂಬಿ ತಾನು ಒಬ್ಬ ಅಪ್ರತಿಮ ಕಲಾವಿದ ಎಂಬುದನ್ನು ನಿರೂಪಿದಿದ್ದಾರೆ.

ಮೊದಲು ತನ್ನ ಸ್ನೇಹಿತರಾದ ಗೌರವ್ , ಸಾರ್ಥಕ್, ಆದರ್ಶ್ ರಿಂದ ಯಕ್ಷಗಾನದ ಆಯಾಮಗಳನ್ನ ತಿಳಿದ ಇವರು ನಂತರ ನೃತ್ಯವನ್ನು ಗುರುಗಳಾದ ಉಬೆರಡ್ಕ ಉಮೇಶ್ ಅವರ ಗರಡಿಯಲ್ಲಿ ಅಭ್ಯಾಸಮಾಡಿದ್ದು, ಪ್ರಸ್ತುತ ಆಳ್ವಾಸ್ ಕಾಲೇಜ್ ನಲ್ಲಿ ತೆಂಕು ಮತ್ತು ಬಡಗು ನಾಟ್ಯ ತರಬೇತಿ ಪಡೆಯುತ್ತಿದ್ದು, ಯಕ್ಷಗಾನ ಹಿಮ್ಮೇಳವಾದ ಮದ್ದಳೆ ಚೆಂಡೆ ವಾದನದ ತರಬೇತಿಯ ಜತೆಗೆ ಪ್ರಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರಲ್ಲಿ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದು ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧಕನಾಗೋದರಲ್ಲಿ ಸಂಶಯವಿಲ್ಲ.

ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣವನ್ನು ನಗರದ‌ ಪ್ರತಿಷ್ಠಿತ ರಾಮಕೃಷ್ಣ ಶಾಲೆಯಲ್ಲಿ ಪೋರೈಸಿ ಸದ್ಯಕ್ಕೆ ಯಕ್ಷಗಾನ ಹಾಗು‌ ಕ್ರೀಡೆಗೆ ಹೆಸರುವಾಸಿಯಾದ ಮೂಡಬಿದಿರೆಯ ಅಳ್ವಾಸ್  ಕಾಲೇಜ್ ನಲ್ಲಿ ಪಿ ಯು ಸಿ ವ್ಯಾಸಾಂಗ ಮಾಡುತ್ತಿದ್ದಾರೆ.

ಇತ್ತಿಚಿನ ದಿನಗಳಲ್ಲಿ ನಾಟಕ ರಂಗ ಭೂಮಿಯಕಡೆಗೆ ತಮ್ಮ ಒಲವು ತೋರಿಸಿದ್ದು , ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದು. ತಾನು ಯಕ್ಷಗಾನಕ್ಕೂ ಸೈ ಜತೆಗೆ ನಾಟಕಕ್ಕೂ ಸೈ ಎಂಬುದನ್ನು ನಿರೂಪಿಸಿದ್ದಾರೆ.

ಇವರು ಇರಾ ಗ್ರಾಮದ ಸಂಪಿಲ ಯತಿರಾಜ್ ಶೆಟ್ಟಿ ಮತ್ತು ಭಾನುರೇಖ ವೈ ಶೆಟ್ಟಿ ದಂಪತಿಗಳ  ದ್ವಿತೀಯ ಪುತ್ರ


ನಿಮ್ಮ ಟಿಪ್ಪಣಿ ಬರೆಯಿರಿ

ಗಣೇಶ ಚತುರ್ಥಿಯ ಪ್ರಯುಕ್ತ ಯುವಕ ಮಂಡಲ ಪ್ರಾಯೋಜಿತ ಯಕ್ಷಗಾನದ ಕರೆಯೋಲೆ

ವರ್ಷಂಪ್ರತಿಯಂತೆ ಗಣೇಶ ಚತುರ್ಥಿಯ ಅಂಗವಾಗಿ ಯುವಕ ಮಂಡಲ( ರಿ.) ಇರಾ‌ ಇದರ ಪ್ರಾಯೋಜಕತ್ವ ದಲ್ಲಿ “ಕೃಷ್ಷಾರ್ಜುನ-ಅಗ್ರಪೂಜೆ” ಎಂಬ ಯಕ್ಷಗಾನ ಬಯಲಾಟವು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ , ದಿನಾಂಕ 23-09-2018ರ ಭಾನುವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

– ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಯುವಕಮಂಡಲ(ರಿ.) ಇರಾ

IMG-20180721-WA0039.jpg


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಮತ್ತು ಯಕ್ಷಗಾನ

        ಇತ್ತಿಚೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ‌ ಹತ್ತಿರದ ಸಹ ಪ್ರಯಾಣಿಕರೊಬ್ಬರು ಮಾತಿಗಿಳಿದರು. ತಮ್ಮ ಊರು ಯಾವುದೆಂದು ಕೇಳಿದಾಗ, ನಾನು ಇರಾ ಎಂದೆ. ಆಗ ತಕ್ಷಣ ಅವರು ಇರಾ ಯಕ್ಷಗಾನಕ್ಕೆ ತುಂಬಾ ಫೇಮಸ್ ಅಲ್ವಾ ಎಂದರು. ನಾನು ಆಶ್ಚರ್ಯದಿಂದ ಹೌದು , ನಿಮಗೆ ಹೇಗೆ ಗೊತ್ತು ನೀವು ನಮ್ಮೂರಿಗೆ ಬಂದಿದ್ದೀರಾ? ಎಂದು ಅವರನ್ನು‌ ಕೇಳಿದೆ. ಆಗ ಅವರು ಹೌದು ಅಂದರು. ಜತೆಗೆ ಅವರೇ ಮುಂದುವರಿಸಿ ಯಕ್ಷಗಾನ ಕ್ಷೇತ್ರಕ್ಕೆ ಹೊಸ ಆಯಾಮ ಕೊಟ್ಟವರು ನಿಮ್ಮೂರಿನ ಕಲ್ಲಾಡಿ ಕೊರಗ ಶೆಟ್ಟಿ ಮತ್ತು ಅವರ ಪುತ್ರ ಕಲ್ಲಾಡಿ ವಿಠಲ ಶೆಟ್ಟಿಯವರಲ್ವ ಅಂದರು.‌ ನಾನು ತಲೆಯಾಡಿಸಿ ಹೌದು ಎಂದೆ. ಹೀಗೆ ಬಹಳ ಹೊತ್ತು ಮಾತನಾಡಿದ ನನಗೆ ನಮ್ಮ ಊರಿನ ಹಿರಿಯರ ಬಗ್ಗೆ ಹಾಗು ಅವರು ಯಕ್ಷಗಾನಕ್ಕೆ ನೀಡಿದ ಅಪಾರ ಕೊಡುಗೆಗಳ ಮಾಹಿತಿ ಲಭಿಸಿತು.

    ಅದು 1937ರ ಸಮಯ ‌ಕಟೀಲು‌ ಯಕ್ಷಗಾನ ಮೇಳವನ್ನು ಕಲ್ಲಾಡಿ ಕೊರಗ ಶೆಟ್ಟರ ದೂರದ ಸಂಬಂಧಿ ನಿಡ್ಡೋಡಿಗುತ್ತು ಉಗ್ಗಪ್ಪ ಶೆಟ್ಡರು ನಡೆಸುತ್ತಿದ್ದರು. ಆದರೆ ಆ ಸಮಯದಲ್ಲಿ ಮೇಳ ನಡೆಸುವುದು ಈಗಿನಷ್ಟು ಸುಲಭದ ವಿಷಯವಾಗಿರಲಿಲ್ಲ. ಹರಕೆಯ ಆಟಗಳು ಕಡಿಮೆಯಿದ್ದು ಬರುವ ವೀಳ್ಯದ ಮೊತ್ತದಲ್ಲಿ ಕಲಾವಿದರನ್ನು ಪೋಷಿಸುವುದು ಕಷ್ಟಕರವಾಗಿತ್ತು. ಉತ್ತಮ ವ್ಯಕ್ತಿತ್ವ ಹೊಂದಿರುವ ಕೊರಗ ಶೆಟ್ಟರು ಜಿನಸಿ ಸಾಮಾನುಗಳ ವ್ಯಾಪಾರದ ಬಂಡಸಾಲೆಯನ್ನು ಹೊಂದಿದ್ದರು. ಕೊರಗ ಶೆಟ್ಟರ ಸಾಮರ್ಥ್ಯವನ್ನು ಗಮನಿಸಿದ ಉಗ್ಗಪ್ಪ ಶೆಟ್ಟರು ಕಟೀಲು ಮೇಳವನ್ನು ಕಲ್ಲಾಡಿ ಕೊರಗ ಶೆಟ್ಟರಿಗೆ ನೀಡಿದರು. ಹೀಗೆ ಕಲ್ಲಾಡಿ ಕೊರಗ ಶೆಟ್ಟರ ಕೈಗೆ ಬಂದ ಕಟೀಲು ಮೇಳ ಹೊಸ ಅಯಾಮ ಪಡೆಯಿತು ಎಂದರೆ ತಪ್ಪಾಗಲಾರದು. ಅಂದಿನ ಕಾಲದಲ್ಲಿ ಕಲಾವಿದರನ್ನು ಒಟ್ಟು ಸೇರಿಸಿ ಮೇಳ ನಡೆಸುವುದು ಸುಲಬದ ಮಾತಾಗಿರಲಿಲ್ಲ. ಯಾಕೆಂದರೆ ಯಕ್ಷಗಾನದಿಂದ ಸಿಗುವ ಆದಾಯದಲ್ಲಿ ಕಲಾವಿದರಿಗೆ ಕುಟುಂಬ ನಿರ್ವಹಿಸುವುದು ಕಷ್ಟಕರವಾಗಿತ್ತು ಹಾಗಾಗಿ ಅವರು ಪರ್ಯಾಯ ವೃತ್ತಿಯನ್ನು ಕಂಡುಕೊಳ್ಳುತಿದ್ದರು. ಇಂತಹ ಸಂದರ್ಭದಲ್ಲಿ ಕಟೀಲು ಮೇಳವನ್ನು ಯಶಸ್ವಿಯಾಗಿ ನಡೆಸಿ ಉತ್ತುಂಗಕ್ಕೆ ಏರಿಸಿದವರು ನಮ್ಮ ಕೊರಗ ಶೆಟ್ಟರು ಎಂದರೆ ತಪ್ಪಾಗಲಾರದು.ಹೀಗೆಯೇ ಕಟೀಲು ಮೇಳ ನಡೆಸಿದ ಅನುಭವದಿಂದ ಶೆಟ್ಟರು ಇನ್ನೊಂದು ಮೇಳ ಪ್ರಾರಂಬಿಸಿದರು ಅದೇ 1942 ರಲ್ಲಿ ಪ್ರಾರಂಭವಾದ ಕುಂಡಾವು ಮೇಳ. ಇದು ಕೂಡ ಕಟೀಲು ಮೇಳದಂತೆ ಬಹಳ ಬೇಗ ಪ್ರಸಿದ್ಧಿ ಪಡೆದ ಮೇಳವಾಗಿದೆ. ಅಲ್ಲಿಗೆ ನಿಲ್ಲದ ಶೆಟ್ಟರು ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ನಾಟಕ ಸಭಾ ಎಂಬ ಡೇರೆ ಮೇಳವನ್ನು ಸ್ಥಾಪಿಸಿ ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದರು ಜತೆಗೆ ನಮ್ಮ ಊರಿನ ಹೆಸರನ್ನು ಸರ್ವದಿಕ್ಕುಗಳಿಗೂ ಪಸರಿಸಿದರು. ತಂದೆಯಂತೆ ಮಗ ಎಂಬ ಮಾತಿನಂತೆ ಕೊರಗ ಶೆಟ್ಟರ ಸುಪುತ್ರ ಕಲ್ಲಾಡಿ ವಿಠಲ ಶೆಟ್ಟಿಯವರು ಕೂಡ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ತಂದೆಯ ಪ್ರೇರಣೆಯಂತೆ 1955ರಲ್ಲಿ “ ಕರ್ನಾಟಕ ಯಕ್ಷಗಾನ ನಾಟಕ ಸಭಾ ಮಂಗಳೂರು “ ಸ್ಥಾಪಿಸಿದ ಇವರು , ಮಂಗಳೂರು ನೆಹರು‌ ಮೈದಾನದಲ್ಲಿ ಡೇರೆ ಆಟವನ್ನು ಪ್ರಾರಂಬಿಸಿ ಅಭೂತಪೂರ್ವ ಯಶಸ್ಸು ಸಾಧಿಸಿದರು. ಯಕ್ಷಗಾನದಲ್ಲಿ ಸೀನರಿಗಳನ್ನು ಅಳವಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಈ ಯಶಸ್ಸನ್ನು ಕಂಡ ಇವರ ತಂದೆ ಕಟೀಲು ಮೇಳದ‌ ಯಜಮಾನಿಕೆಯನ್ನು ಇವರಿಗೆ 1965 ರಲ್ಲಿ‌ನೀಡುತ್ತಾರೆ, ಮೊದಲಿನಿಂದಲು ತಂದೆಯ ಜತೆ ಮೇಳದ ಕೆಲಸಗಳನ್ನು ‌ನೋಡಿಕೊಂಡಿದ್ದ ವಿಠಲ ಶೆಟ್ಟರು ಬಹಳ ಬೇಗ ಮೇಳದ ಎಲ್ಲಾ ಕಲಾವಿದರ ಗೌರವಕ್ಕೆ ‌ಪಾತ್ರರಾಗುತ್ತಾರೆ. ಕಲಾವಿದರ ಜೀವನದ ಭದ್ರತೆಯ ವಿಚಾರದಲ್ಲಿ ಇವರು ತಗೊಂಡ ನಿರ್ದಾರಗಳು ಇಂದು ಹಲವು ಕಲಾವಿದರ ನೆಮ್ಮದಿಯ ಜೀವನಕ್ಕೆ ಕಾರಣವಾಗಿರುವುದು ಅತ್ಯಂತ ಹೆಮ್ಮೆಯ ವಿಷಯ. ಇಷ್ಟಕ್ಕೆ ನಿಲ್ಲದ ವಿಠಲ ಶೆಟ್ಟರು 1962ರಲ್ಲಿ ಪೊಳಲಿ ರಾಜರಾಜೇಶ್ವರಿ ಯಕ್ಷಗಾನ ಮೇಳವನ್ನು ‌ಸ್ಥಾಪಿಸಿ , ಬಡಗು ಹಾಗು ತೆಂಕಣ ಮೇಳಗಳ‌ ಸಮ್ಮಿಲನ ಆರಂಬಿಸಿ ಯಕ್ಷಗಾನ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆದರು. ಇಲ್ಲಿ ಮಧ್ಯರಾತ್ರಿಯ ವರೆಗೆ ತೆಂಕು ತದ ನಂತರ ಬಡಗಿನ ಶೈಲಿಯಲ್ಲಿ ಯಕ್ಷಗಾನ ನಡೆಯುತಿತ್ತು. ಹೀಗೆ ಯಕ್ಷಗಾನಕ್ಕೆ ಇರಾ ಗ್ರಾಮ ನೀಡಿರುವ ಕೊಡುಗೆ ಅಪಾರ.

          ಇರಾ ಗ್ರಾಮದ ಜನ ಯಕ್ಷಪ್ರೇಮಿಗಳಲ್ಲದೆ ಸ್ವತಃ ಯಕ್ಷ ಪೋಷಕರೂ ಆಗಿದ್ದಾರೆ. ಹಲವು ಯಕ್ಷಪೋಷಕರ ನಡುವೆ 1950ರ ಕಾಲಘಟ್ಟದಲ್ಲಿ ಪ್ರತೀ ಸೋಮವಾರ ತನ್ನ ಅಂಗಡಿಯ ವಠಾರದಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸಿ ಊರಿನ ಹಲವು ಕಲಾವಿದರ ಬೆಳವಣಿಗೆಗೆ ಕಾರಣರಾದವರು ತಾಳಿತ್ತಬೆಟ್ಟು ಪಿ. ರಾಮಣ್ಣ ಕೊಟ್ಟಾರಿ. ಅವರಿಗೆ ಸಹಕಾರ ನೀಡಿದವರಲ್ಲಿ ಪ್ರಮುಖರು ಸಂಪಿಲ ಮಹಾಬಲ ಶೆಟ್ಟಿ, ಕುರಿಯಾಡಿ ಮಹಾಬಲ ಪಕ್ಕಳ, ಅಲ್ಕೀರು ಗೋಪಾಲಕೃಷ್ಣ ಭಾಗವತರು. ಅಂದಿನಿಂದ ಇಂದಿನವರೆಗೂ ಇರಾ ಯಕ್ಷಗಾನಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ಪ್ರಸ್ತುತ ಕಟೀಲು 6 ಮೇಳಗಳ ಸಂಚಾಲಕತ್ವ ಕಲ್ಲಾಡಿ ವಿಠಲ ಶೆಟ್ಟರ ಮಗ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರುವಹಿಸಿದ್ದು ಹಲವು ವರ್ಷಗಳ ವರೆಗೆ ಯಕ್ಷಗಾನ ಹರಕೆ ಸೇವೆ ಮುಂಗಡವಾಗಿ ನೊಂದಣೆಯಾಗಿರುವುದು ಮತ್ತೊಂದು ವಿಷೇಷ. ಇರಾ ಗ್ರಾಮದಲ್ಲಿ ಪ್ರಸ್ತುತ ಹಲವು ಕಲಾವಿದರಿದ್ದು ಅವರಲ್ಲಿ ಪುಷ್ಪರಾಜ್ ಕುಕ್ಕಾಜೆ, ಶ್ರೀಧರ ಪೂಜಾರಿ ಪಂಜಾಜೆ, ಶ್ರೀಧರ ರೈ ದರ್ಖಾಸ್ ಮುಂಚೋಣಿಯಲ್ಲಿರುತ್ತಾರೆ. ಅಷ್ಟೇ ಅಲ್ಲದೇ ನಮ್ಮಲ್ಲಿ ಹಲವು ಯುವ ಕಲಾವಿದರಿದ್ದು ಭವಿಷ್ಯದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ ನಮ್ಮ ಗ್ರಾಮದ ಹೆಸರನ್ನು ದೇಶ ವಿದೇಶಗಳಲ್ಲಿ ಪಸರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.


ನಿಮ್ಮ ಟಿಪ್ಪಣಿ ಬರೆಯಿರಿ

ಇರಾ ಶ್ರೀ ಸೋಮನಾಥೇಶ್ವರ ದೇವರ ವರ್ಷಾವಧಿ ಜಾತ್ರಾ ಮಹೋತ್ಸವದ ಕರೆಯೋಲೆ

  ಇತಿಹಾಸ ಪ್ರಸಿದ್ಧ ಇರಾ ಶ್ರೀ ಸೋಮನಾಥೇಶ್ವರ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ದಿನಾಂಕ 25-02-2018 ರಿಂದ 03-03-2018ರವರೆಗೆ ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದ್ದು ನಾವೆಲ್ಲರೂ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಆದರದಿಂದ ಆಮಂತ್ರಿಸುವ.

ಅರ್ಚಕರು ಹಾಗೂ ಆಡಳಿತ ಮಂಡಳಿ

– ಅಧ್ಯಕ್ಷರು ಮತ್ತು ಸದಸ್ಯರು, ಇರಾ ಶ್ರೀ ಸೋಮನಾಥೇಶ್ವರ ಸೇವಾ ಸಮಿತಿ

– ಅಧ್ಯಕ್ಷರು ಮತ್ತು ಸದಸ್ಯರು, ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.), ಕುಂಡಾವು ಇರಾ

– ಅಧ್ಯಕ್ಷರು ಮತ್ತು ಸದಸ್ಯರು, ಯುವಕ ಮಂಡಲ (ರಿ.), ಇರಾ

– ಅಧ್ಯಕ್ಷರು ಮತ್ತು ಸದಸ್ಯರು, ಇರಾ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ( ರಿ.), ಇರಾ

– ಇರಾ , ಮಂಚಿ, ಬೋಳಂತೂರು ಗ್ರಾಮಗಳ ಹತ್ತು ಸಮಸ್ತರು.